ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ನಿರ್ಮುಡ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕ ಜೂಜಾಟದ ಅಡ್ಡೆ ಮೇಲೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, 74 ಸಾವಿರ ರೂ.ಗೂ ಅಧಿಕ ಮೌಲ್ಯದ ವಾಹನ ಹಾಗೂ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.
ಆಗಸ್ಟ್ 3ರಂದು ಸಂಜೆ 5:15ರ ಸುಮಾರಿಗೆ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್. ಗಾಣಿಗೇರ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಬೀಟ್ ಸಿಬ್ಬಂದಿ ನೀಡಿದ ಖಚಿತ ಮಾಹಿತಿಯ ಮೇರೆಗೆ ನಿರ್ಮುಡ ಪ್ರದೇಶಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಆರೋಪಿಗಳು ಕೋಳಿಗಳ ಕಾಲಿಗೆ ಬಾಳು (ಸಣ್ಣ ಕತ್ತಿ) ಕಟ್ಟಿ, ಪರಸ್ಪರ ಕಾದಾಟಕ್ಕೆ ಬಿಟ್ಟು ಹಣವನ್ನು ಪಣವಾಗಿಟ್ಟುಕೊಂಡು ಸಂಘಟಿತವಾಗಿ ಜೂಜಾಟ ನಡೆಸುತ್ತಿರುವುದು ಪತ್ತೆಯಾಗಿದೆ. ಪೊಲೀಸರನ್ನು ಕಂಡ ತಕ್ಷಣ ಜೂಜಾಟದಲ್ಲಿ ನಿರತರಾಗಿದ್ದ ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರನ್ನು ಕಂಡ ಕೂಡಲೇ ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ನಿರ್ಮುಡ ನಿವಾಸಿ ಧರ್ಣಪ್ಪ ಗೌಡ (38) ಹಾಗೂ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ನಿವಾಸಿ ಹರೀಶ್ ಎಸ್. (30) ಎಂದು ಗುರುತಿಸಲಾಗಿದೆ.

ದಾಳಿಯ ವೇಳೆ ಜೂಜಾಟಕ್ಕೆ ಬಳಸಲಾಗಿದ್ದ 350 ನಗದು, ಎರಡು ಬಾಳು (ಸಣ್ಣ ಕತ್ತಿ), ವಿವಿಧ ಜಾತಿಯ ನಾಲ್ಕು ಕೋಳಿಗಳು ಹಾಗೂ ಮೂರು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 74,370 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂ 112, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960ರ ಕಲಂ 11(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.






