ಕಾಪು: ಆರೋಗ್ಯ ಸಮಸ್ಯೆ ಹಾಗೂ ಬಡತನದಿಂದ ಕಷ್ಟದ ಜೀವನ ನಡೆಸುತ್ತಿದ್ದ ಕುತ್ಯಾರ್ ಗ್ರಾಮದ ಅಸಹಾಯಕ ತಾಯಿ-ಮಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಿ.ಸಿ. ಟ್ರಸ್ಟ್ ಕಾಪು ತಾಲೂಕು ಘಟಕವು ನೆರವಿನ ಹಸ್ತ ಚಾಚಿದ್ದು, ಮಾಸಾಸನ ಮಂಜೂರು ಮಾಡಿ ವಿತರಿಸಿದೆ.

ಕಾಪು ತಾಲೂಕಿನ ಕುತ್ಯಾರ್ ಗ್ರಾಮದ ನಿವಾಸಿಯಾಗಿರುವ ಲೀಲಾ ಕೋಟ್ಯಾನ್ ಮತ್ತು ಅವರ ಮಗಳು ಜ್ಯೋತಿ ಅವರು ಮನೆಯಲ್ಲಿ ಇಬ್ಬರೇ ವಾಸಿಸುತ್ತಿದ್ದಾರೆ. ಲೀಲಾ ಅವರಿಗೆ ವಯೋಸಹಜ ವೃದ್ಧಾಪ್ಯ ಹಾಗೂ ತೀವ್ರ ಕಾಲುನೋವಿನಿಂದಾಗಿ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ.


ಇತ್ತ ಅವರ ಮಗಳು ಜ್ಯೋತಿ ಅವರು ಬುದ್ಧಿಮಾಂದ್ಯತೆ ಮತ್ತು ದೈಹಿಕ ಅಂಗವೈಕಲ್ಯದಿಂದ ಬಳಲುತ್ತಿದ್ದು, ಸಂಪೂರ್ಣವಾಗಿ ತಾಯಿಯನ್ನೇ ನೆಚ್ಚಿಕೊಂಡಿದ್ದಾರೆ. ಯಾವುದೇ ದಾರಿ ಇಲ್ಲದೆ, ದೈನಂದಿನ ಜೀವನ ಸಾಗಿಸಲು ಈ ಕುಟುಂಬ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು.

ಈ ಕುಟುಂಬದ ಕಷ್ಟದ ಪರಿಸ್ಥಿತಿಯನ್ನು ಅರಿತ ಕಾಪು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಮಮತಾ ಮೇಡಂ ಅವರು ತಕ್ಷಣ ಸ್ಪಂದಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಸಾಸನ ಸೌಲಭ್ಯ ದೊರಕಿಸಿಕೊಡಲು ಶಿಫಾರಸು ಮಾಡಿದ್ದರು.

ಅದರಂತೆ ಯೋಜನೆಗೆ ಮಂಜೂರಾದ ಮಾಸಾಸನವನ್ನು ಇಂಧು ಅಧಿಕೃತವಾಗಿ ಲೀಲಾ ಕೋಟ್ಯಾನ್ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಪೂಜ್ಯ ಖಾವಂದರ ಆಶಯದಂತೆ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಯೋಜನೆ ನೀಡಿದ ಈ ನೆರವು ತಾಯಿ-ಮಗಳಿಗೆ ದೊಡ್ಡ ಆಸರೆಯಾಗಿದೆ. ಯೋಜನಾಧಿಕಾರಿಗಳ ಈ ಮಾನವೀಯ ಕಾರ್ಯಕ್ಕೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಕುತ್ಯಾರ್ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.





