ಬೆಳ್ತಂಗಡಿ: ಕರಾವಳಿ ಭಾಗವನ್ನು ಬೆಚ್ಚಿಬೀಳಿಸಿದ್ದ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಲಾವಣ್ಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಬೆಳವಣಿಗೆಯೊಂದು ಹೊರಬಿದ್ದಿದೆ.

ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿ, ಓಡಿಲ್ನಾಳ ಗ್ರಾಮದ ಚೇತನ್ಗೆ ಇದೀಗ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಜುಲೈ 16ರ ಸಂಜೆ, ಕಕ್ಯಪದವಿನ ನಿವಾಸಿ 21 ವರ್ಷದ ಲಾವಣ್ಯ ಅವರು ತಮ್ಮ ಊರಿಗೆ ತೆರಳಲು ಬಿ.ಸಿ.ರೋಡ್ನ KSRTC ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಕುಳಿತಿದ್ದರು. ಈ ವೇಳೆ ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ 22 ವರ್ಷದ ಚೇತನ್ ಎಂಬಾತ ಸ್ಥಳಕ್ಕೆ ಆಗಮಿಸಿ, ಸಾರ್ವಜನಿಕರ ಎದುರಲ್ಲೇ ತಲವಾರಿನಿಂದ ಆಕೆಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಈ ಘೋರ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಕೊಲೆ ನಡೆದ ಮರುದಿನ ಮಂಗಳೂರಿನ ಪಚ್ಚನಾಡಿಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆ ಸಂದರ್ಭದಲ್ಲಿ ತಾನು ಇಲಿಪಾಷಾಣ ಸೇವಿಸಿರುವುದಾಗಿ ಆರೋಪಿ ಹೇಳಿದ್ದರಿಂದ ಆತನನ್ನು ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಸುಮಾರು 11 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ನಂತರ, ವೈದ್ಯರ ಸಲಹೆಯಂತೆ ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ ಆರೋಪಿಯನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಈ ವೇಳೆ ತನಿಖಾಧಿಕಾರಿಗಳು ಕೃತ್ಯ ನಡೆದ ಸ್ಥಳ ಹಾಗೂ ಆಯುಧ ಖರೀದಿಸಿದ ಜಾಗಗಳಿಗೆ ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು.
ಪೋಲಿಸ್ ಕಸ್ಟಡಿ ಅವಧಿ ಮುಕ್ತಾಯಗೊಳ್ಳುವ ಒಂದು ದಿನ ಮುಂಚಿತವಾಗಿಯೇ ತನಿಖಾ ತಂಡ ಆರೋಪಿಯನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.





