ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯ ಶಿಕ್ಷಕರೂ ಹಾಗೂ ಮಾಜಿ ಎನ್ಸಿಸಿ ನೇವಲ್ ಆಫೀಸರ್ರಾದ ಶ್ರೀ ಪದ್ಮರಾಜ್ ಜೈನ್ ಅವರು ಆಗಮಿಸಿ ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ. ಆರ್. ಅವರು ಉಪಸ್ಥಿತರಿದ್ದರು. ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳ ವಿದ್ಯಾರ್ಥಿಗಳು ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ 10 ವರ್ಷಗಳ ಕಾಲ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಪ್ರಮೀಳಾ ಪೂಜಾರಿ ಅವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯಿಂದ ನೀಡಲ್ಪಟ್ಟ ಸೇವಾ ಪ್ರಶಸ್ತಿ ಹಾಗೂ ಪದಕವನ್ನು ಮುಖ್ಯ ಅತಿಥಿ ಶ್ರೀ ಪದ್ಮರಾಜ್ ಜೈನ್ ಅವರು ಪ್ರದಾನ ಮಾಡಿ ಗೌರವಿಸಿದರು.
ಅದೇ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆದ ಆರಾಧ್ಯ, ತನಿಯಾ ಜೈನ್, ಮೇದಸ್ವಿ ಹರೀಶ್ ಶೆಟ್ಟಿ, ಶ್ರೀಜಾ ಹಾಗೂ ಮೊಹಮ್ಮದ್ ಯಾಹ್ಯಾ ಅವರನ್ನು ಗೌರವಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಮುಖ್ಯ ಅತಿಥಿ ಶ್ರೀ ಪದ್ಮರಾಜ್ ಜೈನ್ ಅವರು ತಮ್ಮ ಸಂದೇಶದಲ್ಲಿ ದೇಶದ ಹೆಮ್ಮೆ, ದೇಶದ ಗಡಿಯನ್ನು ಕಾಯುವ ವೀರ ಯೋಧರ ತ್ಯಾಗ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಗುರು-ಹಿರಿಯರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ದೇಶಭಕ್ತಿಯ ಘೋಷಣೆಗಳನ್ನು ಮೊಳಗಿಸುತ್ತಾ “ನನ್ನ ಭಾರತದ ರಕ್ಷಣೆ ನನ್ನ ಕರ್ತವ್ಯ” ಎಂಬ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ಧನ್ಯವಾದವನ್ನು ಶಿಕ್ಷಕಿಯರಾದ ಶ್ರೀಮತಿ ಜೆಸಿಂತಾ ಹಾಗೂ ಶ್ರೀಮತಿ ನೀತಾ ಕೆ. ಎಸ್. ಅವರು ನೆರವೇರಿಸಿದರು. ಶಿಕ್ಷಕಿ ಕಸ್ತೂರಿ ಅವರು ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು.

ಶಿಕ್ಷಕ ಎನ್ಸಿಸಿ ಆಫೀಸರ್ ಸದಾನಂದ, ಕವನ ಚಿತ್ತಾರ, ವಾಗ್ದೇವಿ, ಪ್ರಮೀಳಾ ಎನ್., ಸುಮಲತಾ ಹಾಗೂ ಅವರ ಸಂಘಟನಾ ಸಹಕಾರದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸಹಕರಿಸಿದರು.

ತದನಂತರ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಸ್ವಾತಂತ್ರ್ಯೋತ್ಸವದ ಸಂಭ್ರಮ ಮತ್ತಷ್ಟು ಕಳೆಗಟ್ಟಿತು.






