ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಬರ್ನ ಎಂಬಲ್ಲಿ ಆಗಸ್ಟ್ 15ರಂದು ಘೋರ ರಸ್ತೆ ಅಪಘಾತವೊಂದು ಸಂಭವಿಸಿದ್ದು, 14 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.


ಘಟನೆಯ ವಿವರಕ್ಕೆ ಬರುವುದಾದರೆ, ಮುಂಡಾಡಿ ಮನೆಯ ಜಗನ್ನಾಥ ಶೆಟ್ಟಿ ಎಂಬವರು ಆಗಸ್ಟ್ 15 ರಂದು ಬೆಳಗ್ಗೆ ಸುಮಾರು 10:30ಕ್ಕೆ ಕ್ಷಿತಿಜ್ ಎಂಬ 14 ವರ್ಷದ ಬಾಲಕನನ್ನು ತಮ್ಮ ಆಟೋರಿಕ್ಷಾದಲ್ಲಿ ಆತನ ಮನೆಗೆ ತಲುಪಿಸಲು ಮಾಲಾಡಿ-ಗರ್ಡಾಡಿ ರಸ್ತೆಯಲ್ಲಿ ತೆರಳುತ್ತಿದ್ದರು. ಬರ್ನ ತಲುಪುತ್ತಿದ್ದಂತೆ ಕ್ಷಿತಿಜ್ ಆಟೋದಿಂದ ಇಳಿದು ರಸ್ತೆ ದಾಟಲು ಮುಂದಾಗಿದ್ದಾನೆ.


ಈ ವೇಳೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಅಪ್ರಾಪ್ತ ಬಾಲಕನೊಬ್ಬ, ಹಿಂಬದಿ ಸವಾರನನ್ನು ಕುಳ್ಳಿರಿಸಿಕೊಂಡು KA-70-L-0120 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಅನ್ನು ನೇರವಾಗಿ ಕ್ಷಿತಿಜ್ಗೆ ಢಿಕ್ಕಿ ಹೊಡೆದಿದ್ದಾನೆ.

ಢಿಕ್ಕಿಯ ರಭಸಕ್ಕೆ ಬಾಲಕ ಕ್ಷಿತಿಜ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಹಣೆಗೆ ಹಾಗೂ ಕಾಲಿಗೆ ತೀವ್ರ ರಕ್ತಗಾಯಗಳಾಗಿವೆ. ತಕ್ಷಣವೇ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಅಪ್ರಾಪ್ತ ಬೈಕ್ ಸವಾರನ ನಿರ್ಲಕ್ಷ್ಯ ಹಾಗೂ ಅಜಾಗರೂಕ ಚಾಲನೆಯೇ ಕಾರಣ ಎಂದು ಹೇಳಲಾಗಿದೆ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125(A) ಹಾಗೂ ಮೋಟಾರು ವಾಹನ ಕಾಯ್ದೆಯ (IMV) ಕಲಂ 199(A) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





