ಉಜಿರೆ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಸಾನಿಧ್ಯ ಹೆಬ್ಬಾರ್ ಅವರು ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆ-2026ರ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆರನೇ ರ್ಯಾಂಕ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಸುಮಾರು 800 ಸ್ಪರ್ಧಿಗಳ ಪೈಕಿ ಆಯ್ಕೆಯಾದ ಅತ್ಯುತ್ತಮ 13 ಚಿತ್ರಕಲೆಗಳಲ್ಲಿ ಆರನೇ ಸ್ಥಾನ ಗಳಿಸಿರುವುದು ಅವರ ಕಲಾಪ್ರತಿಭೆಗೆ ಸಂದ ವಿಶೇಷ ಗೌರವವಾಗಿದೆ.

ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ (Ministry of Power) ಅಡಿಯಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಹಾಗೂ ಮಿಷನ್ ಲೈಫ್ (Mission LiFE) ಸಹಯೋಗದಲ್ಲಿ “Energy Conservation for Energy Security” (ಇಂಧನ ಭದ್ರತೆಗಾಗಿ ಇಂಧನ ಸಂರಕ್ಷಣೆ) ಎಂಬ ಆಶಯದೊಂದಿಗೆ ಈ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಮೂಲಕ ರಾಜ್ಯಮಟ್ಟದ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ ನಡೆದಿತ್ತು.


ಇಂಧನ ಸಂರಕ್ಷಣೆ ಹಾಗೂ ಇಂಧನ ಭದ್ರತೆಯ ಮಹತ್ವವನ್ನು ಚಿತ್ರಕಲೆಯ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಈ ಸ್ಪರ್ಧೆಯಲ್ಲಿ ಸಾನಿಧ್ಯ ಅವರು ತಮ್ಮ ಸೃಜನಶೀಲತೆ, ಕಲ್ಪನಾಶಕ್ತಿ ಮತ್ತು ಕಲಾತ್ಮಕ ಅಭಿವ್ಯಕ್ತಿಯಿಂದ ಗಮನ ಸೆಳೆದಿದ್ದಾರೆ. ಸುಮಾರು 800 ಸ್ಪರ್ಧಿಗಳ ಪೈಪೋಟಿಯಲ್ಲಿ ಅತ್ಯುತ್ತಮ 13 ಚಿತ್ರಕಲೆಗಳಲ್ಲಿ ಸ್ಥಾನ ಪಡೆದು, ಅವುಗಳ ಪೈಕಿ ಆರನೇ ರ್ಯಾಂಕ್ ಗಳಿಸಿರುವುದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.





