ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಮಾತಾ -ಪಿತೃ ಪೂಜನ ಹಾಗೂ ಆಶೀರ್ವಾದ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಮಹಾವೀರ ಜೈನ್ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ, ಶಿಕ್ಷಣ ಬದುಕಿನ ಹಸಿವನ್ನು ನೀಗಿಸಿದರೆ, ಸಂಸ್ಕಾರ ಬದುಕಿಗೆ ಅರ್ಥವನ್ನು ನೀಡುತ್ತದೆ ಹಾಗು ವ್ಯಕ್ತಿತ್ವವನ್ನು ರೂಪಿಸುತ್ತದೆ.

ವಿದ್ಯಾರ್ಥಿಗಳು ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಬಣ್ಣ ,ಜಾತಿ ,ಸೌಂದರ್ಯ, ಹಣ ಕ್ಕಿಂತಲೂ ಸಂಸ್ಕಾರ ಅತೀ ಮುಖ್ಯ. ಶಿಕ್ಷಣ ಮತ್ತು ಸಂಸ್ಕಾರ ಎರಡು ರೆಕ್ಕೆ ಇದ್ದಂತೆ. ಇವೆರಡು ಸಾಮರ್ಥವಾಗಿದ್ದರೆ ಜಗತ್ತಿನ ಯಾವ ದೇಶಕ್ಕೆ ಹೊಗಿಯಾಗಿದರೂ ನೈತಿಕತೆಯಿಂದ ಬದುಕಲು ಸಾಧ್ಯ .
ಆಸಕ್ತಿ ಮತ್ತು ಏಕಾಗ್ರತೆಯನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು.

ವಿದ್ಯಾರ್ಥಿ ಬದುಕಿನಲ್ಲಿ ಯಾವ ದುಷ್ಚಟ ಮತ್ತು ನಕಾರಾತ್ಮಕ ಚಿಂತನೆಗಳಿಗೆ ಬಲಿಯಾಗದೆ ಪ್ರಯತ್ನಶೀಲರಾಗಿ ಗುರಿಸಾಧಿಸಬೇಕು ಎಂದು ಅನೇಕ ಸಾಧಕರ ಬದುಕಿನ ಕಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರತ್ನಮಾನಸ ವಿದ್ಯಾರ್ಥಿ ನಿಲಯದ ಪಾಲಕರಾದ ಯತಿಶ್ ಕೆ ಬಳಂಜ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಬೆಳವಣಿಗೆಗೆ ಶೈಕ್ಷಣಿಕ ವಲಯದ ಎಲ್ಲಾ ಕಾರ್ಯಚಟುವಟಿಕೆಗಳಲ್ಲೂ ನಿರಂತರವಾಗಿ ತೊಡಗಿಸಿ ಕೊಳ್ಳಬೇಕು ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳಿಗೆ ಪಾದ ಪೂಜೆಯನ್ನು ಮಾಡಿ ಆಶೀರ್ವಾದವನ್ನು ಪಡೆದರು. ಪೊಷಕರು ಮತ್ತು ವಿದ್ಯಾರ್ಥಿ ಪರಸ್ಪರ ಎದುರು ಕುಳಿತುಕೊಂಡು ಸಿಹಿಯನ್ನು ತಿನ್ನಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಡಾಕ್ಟರೇಟ್ ಪದವಿಯನ್ನು ಪಡೆದ ಮಹಾವೀರ ಜೈನ್ ರವರನ್ನು ರತ್ನಮಾನಸ ವಿದ್ಯಾರ್ಥಿ ನಿಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ವಿದ್ಯಾರ್ಥಿಗಳಾದ ನಿಶಿತ್ ಮತ್ತು ರಾಕೇಶ್ ಆರ್ ಹಾಗೂ ಪೊಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.
ನಿಲಯದ ಅಧ್ಯಾಪಕರಾದ ರವಿಚಂದ್ರ ಸ್ವಾಗತಿಸಿ, ವಿದ್ಯಾರ್ಥಿ ಕೌಶಿಕ್ ಮತ್ತು ರಾಕೇಶ್ ಡಿ ಆರ್ ಪ್ರಾರ್ಥನೆ ಮಾಡಿದರು. ಅಧ್ಯಾಪಕರಾದ ಉದಯ ರಾಜ್ ನಿರೂಪಿಸಿ, ದೀಪಕ್ ವಂದಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಪೋಷಕರೊಂದಿಗೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.








