ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮೈನಡುಗಿಸುವ ಘಟನೆಯೊಂದು ಸಂಭವಿಸಿದೆ. ಕೇವಲ ಒಂದು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆಂದು ಬಂದಿದ್ದ ದಂಪತಿಗಳ ನಡುವೆ ನಡೆದ ಕಲಹ, ಕೊಲೆಯಲ್ಲಿ ಅಂತ್ಯವಾಗಿದೆ.

ಅನೈತಿಕ ಸಂಬಂಧದ ಸಂಶಯದಿಂದ ಪತಿಯೊಬ್ಬ ತನ್ನ ಪತ್ನಿಯನ್ನೇ ಭೀಕರವಾಗಿ ಹತ್ಯೆ ಮಾಡಿ, ತಾನೂ ಸಾವಿಗೆ ಶರಣಾಗಲು ಯತ್ನಿಸಿರುವ ಹೃದಯವಿದ್ರಾವಕ ಘಟನೆ ಅರಿಯಡ್ಕ ಗ್ರಾಮದ ಗೋಳ್ತಿಲದಲ್ಲಿ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ಪ್ರಕರಣ ಸಂಖ್ಯೆ 46/2026ರಡಿ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 103 ಅನ್ವಯ ಪ್ರಕರಣ ದಾಖಲಾಗಿದೆ. ಘಟನೆಯು ಮಾರ್ಚ್ 20, 2026ರಂದು ಬೆಳಿಗ್ಗೆ ಸುಮಾರು 6:30ರಿಂದ 6:35ರ ನಡುವೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಗೋಳ್ತಿಲ ಪ್ರದೇಶದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸಾವಿತ್ರಿ (42) ಎಂದು ಗುರುತಿಸಲಾಗಿದ್ದು, ಮೃತ ಸಾವಿತ್ರಿ ಅವರು ಕಳೆದ ಒಂದು ತಿಂಗಳಿನಿಂದ ಗೋಳ್ತಿಲದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಪತಿ ಬೈರಪ್ಪ ತನ್ನ ಪತ್ನಿಯ ನಡತೆಯ ಮೇಲೆ ಸಂಶಯ ವ್ಯಕ್ತಪಡಿಸಿ ಪದೇ ಪದೇ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ ಸಂಶಯ ಮಿತಿಮೀರಿ, ಬೈರಪ್ಪ ಚೂರಿಯಿಂದ ಸಾವಿತ್ರಿ ಅವರ ಮೇಲೆ ದಾಳಿ ಮಾಡಿದ್ದಾನೆ.

ಪಿರ್ಯಾದುದಾರರಾದ ತಿಪ್ಪ (75), ಮೃತಳ ತಂದೆ, ನೀಡಿದ ದೂರಿನ ಪ್ರಕಾರ, ಬೈರಪ್ಪನು ತನ್ನ ಪತ್ನಿ ಸಾವಿತ್ರಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನದಿಂದ ನಿರಂತರ ಗಲಾಟೆ ಮಾಡುತ್ತಿದ್ದನು. ಇದೇ ಅನುಮಾನದಿಂದ ಶುಕ್ರವಾರ ಬೆಳಿಗ್ಗೆ ಚೂರಿಯಿಂದ ಹಲ್ಲೆ ನಡೆಸಿ ಸಾವಿತ್ರಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಘಟನಾ ಸ್ಥಳದಲ್ಲಿದ್ದ ಸಾಕ್ಷಿದಾರ ಸಂತೋಷ್ ಅವರ ಹೇಳಿಕೆಯ ಪ್ರಕಾರ, ಅವರು ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ವೇಳೆ ಬೈರಪ್ಪನು ಚೂರಿ ಹಿಡಿದು ಸಾವಿತ್ರಿಯನ್ನು ಹಿಂಬಾಲಿಸಿ ಹಲ್ಲೆ ನಡೆಸುವುದನ್ನು ಕಂಡು ಭಯದಿಂದ ಅಲ್ಲಿಂದ ಓಡಿ ಹೋಗಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯರು ಬಂದಾಗ ಸಾವಿತ್ರಿ ರಕ್ತದ ಕೆರೆಯಲ್ಲಿ ಬಿದ್ದಿದ್ದರೆ, ಬೈರಪ್ಪನು ತನ್ನ ಕುತ್ತಿಗೆಯನ್ನು ಗಾಯಗೊಳಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಗಾಯಗೊಂಡ ಬೈರಪ್ಪನನ್ನು ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾವಿತ್ರಿಯು ಸ್ಥಳದಲ್ಲೇ ಮೃತಪಟ್ಟಿರುವುದು ದೃಢಪಟ್ಟಿದೆ.
ಈ ಘಟನೆಗೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





