ಉಜಿರೆ: ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ರಾಜ್ಯಾದ್ಯಂತ ವೈರಲ್ ಆಗಿರುವ ಪ್ರಸಿದ್ಧ ನೃತ್ಯ ತಂಡ “ಹಿಪ್-ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ” ಈಗ ಹತ್ತನೇ ವರ್ಷದ ಸಂಭ್ರಮದಲ್ಲಿದೆ.

ತನ್ನ ದಶಮಾನೋತ್ಸವದ ಅಂಗವಾಗಿ ತಂಡವು ಇದೇ ಬರುವ ಏಪ್ರಿಲ್ 18, 2026ರ ಶನಿವಾರ ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
2015ರಲ್ಲಿ ಸಹನ್ ಎಂ.ಎಸ್. ಉಜಿರೆ ಅವರ ನೇತೃತ್ವದಲ್ಲಿ ಆರಂಭವಾದ ಈ ಸಂಸ್ಥೆ, ಕೇವಲ ಹತ್ತು ವರ್ಷಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲೇ ಅತೀ ಹೆಚ್ಚು ಮಕ್ಕಳು ನೃತ್ಯಾಭ್ಯಾಸ ಮಾಡುವ ಏಕೈಕ ನೃತ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇಲ್ಲಿ ತರಬೇತಿ ಪಡೆದ ಅದೆಷ್ಟೋ ಪ್ರತಿಭೆಗಳು ಇಂದು ಚಂದನವನದ ಬೆಳ್ಳಿ ಪರದೆ, ಕಿರುತೆರೆ ಸೀರಿಯಲ್ ಹಾಗೂ ಖ್ಯಾತ ಟಿವಿ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.


ದಶಮಾನೋತ್ಸವದ ಪ್ರಯುಕ್ತ ‘ಉಜಿರೆ ಸ್ಟಾರ್ ನೈಟ್ – ದಶಕದ ಸಂಭ್ರಮ’ ಎಂಬ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮವು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಸಂಜೆ 6 ಗಂಟೆಯಿಂದ ಆರಂಭವಾಗಲಿದೆ.
ಚಲನಚಿತ್ರ ಹಾಗೂ ಕಿರುತೆರೆಯ ಜನಪ್ರಿಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಸ್ಥೆಯ ನೂರಾರು ವಿದ್ಯಾರ್ಥಿಗಳಿಂದ ಮತ್ತು ವಿಶೇಷವಾಗಿ ಪೋಷಕರಿಂದ ಅದ್ಭುತ ನೃತ್ಯ ಪ್ರದರ್ಶನ ನಡೆಯಲಿದೆ.ಹಿಪ್-ಬಾಯ್ಸ್ ತಂಡದ ಸಿಗ್ನೇಚರ್ ಸ್ಟೈಲ್ ಎನಿಸಿಕೊಂಡಿರುವ ಕ್ರಿಯೇಟಿವ್ ನೃತ್ಯಗಳು ನೋಡುಗರನ್ನು ರಂಜಿಸಲಿವೆ.

ಕರಾವಳಿಯ ಈ ಪ್ರತಿಭಾವಂತ ತಂಡದ ಹತ್ತನೇ ವರ್ಷದ ಸಂಭ್ರಮಕ್ಕೆ ಇಡೀ ಉಜಿರೆ ಸಾಕ್ಷಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸುವಂತೆ ಆಯೋಜಕರು ವಿನಂತಿಸಿದ್ದಾರೆ.




