ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ 2019ರಲ್ಲಿ ಸಂಭವಿಸಿದ್ದ ತೀವ್ರ ಸಂಚಲನ ಸೃಷ್ಟಿಸಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಬ್ಬರು ಆರೋಪಿಗಳ ಮೇಲಿನ ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು, ಇಂದು (ಸೆಪ್ಟೆಂಬರ್ 22) ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಘಟನೆಯ ಹಿನ್ನೆಲೆ:
2019ರ ಸೆಪ್ಟೆಂಬರ್ 3ರಂದು ಪುತ್ತೂರಿನ ಸಂಪ್ಯದಲ್ಲಿ ನಡೆದಿದ್ದ ಗಣೇಶೋತ್ಸವದ ಪೆಂಡಾಲ್ನಲ್ಲಿ ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಅವರನ್ನು ಸಾರ್ವಜನಿಕವಾಗಿ ಭೀಕರವಾಗಿ ಕೊಲೆ ಮಾಡಲಾಗಿತ್ತು.
ಪೊಲೀಸ್ ತನಿಖೆ ಮತ್ತು ಬಂಧನ:
ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರೀತೇಶ್ (A1), ಚರಣ್ ರಾಜ್ (A2), ಕಿರಣ್ (A3) ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ್ದ ಸ್ಟೀವನ್ ಮೊಂತೇರೊ ಎಂಬ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಮತ್ತು ತೀರ್ಪು:
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರ ಪೀಠವು, ಆರೋಪಿಗಳಾದ ಪ್ರೀತೇಶ್ (A1) ಮತ್ತು ಕಿರಣ್ (A3) ವಿರುದ್ಧದ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯ ಆರೋಪ ಸಾಬೀತಾಗಿದೆ ಎಂದು ಘೋಷಿಸಿದೆ.

ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಹೊತ್ತಿದ್ದ ಸ್ಟೀವನ್ ಮೊಂತೇರೊ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯವು ವಿಚಾರಣೆ ವೇಳೆ ಖುಲಾಸೆಗೊಳಿಸಿತ್ತು.
ಇನ್ನು 2ನೇ ಆರೋಪಿಯಾಗಿದ್ದ ಚರಣ್ ರಾಜ್ ನನ್ನು 2022ರ ಜೂನ್ 4ರಂದು ಪೆರ್ಲಂಪಾಡಿಯಲ್ಲಿ ದುಷ್ಕರ್ಮಿಗಳ ತಂಡವೊಂದು ಹತ್ಯೆ ಮಾಡಿತ್ತು.

ಇಂದು ಶಿಕ್ಷೆ ಪ್ರಕಟ:
ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ನುಡಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ವೈಜ್ಞಾನಿಕ ವರದಿಗಳನ್ನು ಆಧರಿಸಿ ದೋಷಿ ಎಂದು ತೀರ್ಮಾನಿಸಿರುವ ನ್ಯಾಯಾಲಯವು, ಅಪರಾಧಿಗಳಾದ ಪ್ರೀತೇಶ್ ಹಾಗೂ ಕಿರಣ್ಗೆ ವಿಧಿಸುವ ಶಿಕ್ಷೆಯ ವಿವರಗಳನ್ನು ಇಂದು ಪ್ರಕಟಿಸಲಿದೆ.





