ಪುತ್ತೂರು: ಸಾವು ಯಾವಾಗ, ಹೇಗೆ ಬರುತ್ತೆ ಅಂತ ಹೇಳೋಕೆ ಆಗಲ್ಲ. ಪುತ್ತೂರಿನಲ್ಲಿ ಇಂತಹದ್ದೇ ಒಂದು ದಾರುಣ ಘಟನೆ ನಡೆದಿದೆ. ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ಯುವಕನೊಬ್ಬ ಏಕಾಏಕಿ ಕುಸಿದು ಬಿದ್ದು ಶನಿವಾರ ಅಪರಾಹ್ನ ಮೃತಪಟ್ಟಿದ್ದಾರೆ.

ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ರಮೇಶ್ ರೈ ಮತ್ತು ಯಶೋಧಾ ದಂಪತಿಯ 20 ವರ್ಷದ ಪುತ್ರ ಶಮಿಕ್ ರೈ, ಶನಿವಾರ ಅಪರಾಹ್ನ ಜಿಮ್ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಶಮಿಕ್, ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕೆಂಬ ಕನಸಿನೊಂದಿಗೆ ತೀವ್ರವಾಗಿ ಸಿಎ (CA) ಪರೀಕ್ಷೆಗೂ ಸಿದ್ಧತೆ ನಡೆಸುತ್ತಿದ್ದರು.

ವರ್ಕೌಟ್ ವೇಳೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಉಜ್ವಲ ಭವಿಷ್ಯ ಹೊಂದಿದ್ದ ಈ ಯುವಕನ ಅಕಾಲಿಕ ಸಾವು ಕುಟುಂಬಸ್ಥರು, ಸ್ನೇಹಿತರು ಹಾಗೂ ಇಡೀ ಊರನ್ನೇ ತೀವ್ರ ಶೋಕದಲ್ಲಿ ಮುಳುಗಿಸಿದೆ.






