ಕುಂದಾಪುರ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಬಳಿ ಒಂದು ಅತ್ಯಂತ ಹೃದಯ ವಿದ್ರಾವಕ ಹಾಗೂ ಮನಕಲುಕುವ ಘಟನೆ ವರದಿಯಾಗಿದೆ. ಕಳೆದ ಹದಿನಾಲ್ಕು ವರ್ಷಗಳಿಂದ ಅಂಗವೈಕಲ್ಯದಿಂದ ಬಳಲುತ್ತಿದ್ದ ಮಗಳನ್ನು ತಾಯಿಯೇ ಕತ್ತಿಯಿಂದ ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾಗಿರುವ ದುರಂತ ಆಘಾತ ತಂದಿಟ್ಟಿದೆ.

ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾನಾಡಿ ಕೊರಗ ಕಾಲನಿಯ ನಿವಾಸಿ ಸುಧಾಕರ ಅವರ ಪತ್ನಿ ನೇತ್ರಾವತಿ (40) ಹಾಗೂ ಪುತ್ರಿ ಸುಪ್ರತಿ (14) ಮೃತ ದುರ್ದೈವಿಗಳು.
ಮಾಹಿತಿಯ ಪ್ರಕಾರ, ಸುಪ್ರತಿ ಬಾಲ್ಯದಿಂದಲೂ ತೀವ್ರ ಅಂಗವೈಕಲ್ಯದಿಂದ ಬಳಲುತ್ತಿದ್ದು, ನಡೆದಾಡಲು ಕೂಡ ಸಾಧ್ಯವಿರಲಿಲ್ಲ. ಮಗಳ ಚಿಕಿತ್ಸೆಗಾಗಿ ಪೋಷಕರು ಹಪಹಪಿಸಿ, ಎಷ್ಟೇ ಪ್ರಯತ್ನಪಟ್ಟರೂ ಯಾವುದೇ ಫಲ ಸಿಕ್ಕಿರಲಿಲ್ಲ. ಇಡೀ ದಿನ ಮಗಳ ಆರೈಕೆಯನ್ನೇ ಮಾಡುತ್ತಿದ್ದ ತಾಯಿ ನೇತ್ರಾವತಿ, ಮಗಳ ಈ ಪರಿಸ್ಥಿತಿಯನ್ನು ಕಂಡು ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ.
ಇದೇ ಅಕ್ಟೋಬರ್ 25 ರವಿವಾರದಂದು ಬೆಳಿಗ್ಗೆ 8:30ರ ಸುಮಾರಿಗೆ, ಮಗಳ ನೋವನ್ನು ಸಹಿಸಲಾರದೆ ನೇತ್ರಾವತಿ ಮೊದಲು ಮಗಳನ್ನು ಕತ್ತಿಯಿಂದ ಹತ್ಯೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದಂಪತಿಗೆ ಕೇವಲ ಎರಡು ವರ್ಷದ ಮತ್ತೊಂದು ಗಂಡು ಮಗುವೂ ಕೂಡ ಇದೆ.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯ್ಕ, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್., ಅಪರಾಧ ವಿಭಾಗದ ಮಹಾಂತೇಶ್ ಹಾಗೂ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕೊರಗ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್ ವಿ., ಕೆದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಪ್ರಶಾಂತ್ ಶೆಟ್ಟಿ ಉಳ್ಳೂರು, ಸುಕುಮಾರ್ ಶೆಟ್ಟಿ ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.







