ಬೆಂಗಳೂರು : ಮದುವೆಯಾಗಿದ್ದ 42ರ ಮಹಿಳೆ 28 ವರ್ಷದ ಯುವಕನ ಹಿಂದೆ ಬಿದ್ದಿದ್ದಳಂತೆ. ಈ ವಿವಾಹಿತ ಮಹಿಳೆ ಬೆದರಿಕೆಗೆ ಬೇಸತ್ತು ಯುವಕ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಕೊನೇ ಬಾರಿ ಮಹಿಳೆಗೆ ಫೋನ್ ಮಾಡಿದ್ದ ಜಿಮ್ ಟ್ರೈನರ್ ದಿಲೀಪ್ (28) ರೂಮಿನಲ್ಲೇ ನೇಣಿಗೆ ಶರಣಾಗಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರು ದಿಲೀಪ್ ಸಾವಿಗೆ ಯೋಗಿತಾ ಎಂಬಾಕೆಯೇ ಕಾರಣ ಎಂದು ಆರೋಪ ಮಾಡ್ತಿದ್ದಾರೆ.
ವಿವಾಹಿತ ಮಹಿಳೆ ಯೋಗಿತಾ ಹಾಗೂ 28 ವರ್ಷದ ಜಿಮ್ ಟ್ರೈನರ್ ದಿಲೀಪ್ಗೂ ಸಂಬಂಧವಿತ್ತು ಎನ್ನಲಾಗ್ತಿದೆ. ಜಿಮ್ ನಲ್ಲಿ ಇಬ್ಬರಿಗೂ ಪರಿಚಯವಾಗಿದ್ದು, ಸ್ನೇಹ ಸಂಬಂಧಕ್ಕೆ ತಿರುಗಿ ಬಳಿಕ ಮಹಿಳೆ ಯುವಕನಿಗೆ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದಳು ಎನ್ನುವ ಆರೋಪ ಕೇಳಿ ಬಂದಿದೆ.
ಮಹಿಳೆಯ ಬ್ಲ್ಯಾಕ್ ಮೇಲ್ನಿಂದಲೇ ಯುವಕ ಸಾವಿಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ. ಕೊನೆಯದಾಗಿ ಯೋಗಿತಾಗೆ ಕರೆ ಮಾಡಿದ ದಿಲೀಪ್, ಫೋನ್ ಮಾಡಿದ ಬಳಿಕ ರೂಮಿನಲ್ಲೇ ನೇಣಿಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ.
ನೆಲಮಂಗಲ ಟೌನ್ನ ವಾಜರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಇನ್ಸ್ಟಾಗ್ರಾಮ್ ಮೂಲಕ ಮಹಿಳೆ ಯೋಗಿತಾ ದಿಲೀಪ್ ಸಹೋದರಿಗೆ ಮೆಸೇಜ್ ಮಾಡಿದ್ದು, ನಿನ್ನ ಸಹೋದರ ರೂಮಿನಲ್ಲಿ ಸೂಸೈಡ್ ಮಾಡಿಕೊಂಡಿದ್ದಾನೆ ಎಂದು ಆಕೆಯೇ ತಿಳಿಸಿದ್ದಾಳೆ.
ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, 42 ವರ್ಷದ ಯೋಗಿತಾ ಮದುವೆ ಆಗಿದ್ದರೂ ದಿಲೀಪ್ ಜೊತೆ ಸಂಬಂಧ ಬೆಳೆಸಿ ಬ್ಲ್ಯಾಕ್ ಮೇಲ್ ಮಾಡ್ತಿದ್ದಳು ಎಂದು ಆತನ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.







