ಉಜಿರೆ: “ಗುರಿ ಸಾಧಿಸುವ ಕನಸು ಎಲ್ಲರೂ ಕಾಣುತ್ತಾರೆ. ಆದರೆ ಕನಸನ್ನು ನನಸಾಗಿಸಲು ಏನು ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಗುರಿ, ಕನಸಿನೊಂದಿಗೆ ಪ್ರಯತ್ನ ಸೇರಿದಾಗ ಯಶಸ್ಸು ನಮ್ಮದಾಗುತ್ತದೆ” ಎಂದು ನಟ, ಬೆಂಗಳೂರಿನ ಮೀಶೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹಿರಿಯ ವಿನ್ಯಾಸಕಾರ ಗೋಕುಲ್ ಕೃಷ್ಣ ರಾವ್ ಹೇಳಿದರು.
ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಏಕಶೂನ್ಯಂ 3.0’ ರಾಜ್ಯ ಮಟ್ಟದ ಐಟಿ ಫೆಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಒಂದೊಂದು ಗುರಿ ಇದೆ. ಆ ಗುರಿ ಸಾಧಿಸುವ ಕನಸು ಇದ್ದರೆ ಸಾಲದು, ಶ್ರಮವೂ ಇರಬೇಕು. ಅದಕ್ಕಾಗಿ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
“ಕೌಶಲ್ಯಗಳ ವೃದ್ಧಿಗೆ ಇಂತಹ ಕಾರ್ಯಕ್ರಮಗಳು ಪೂರಕ. ಇಲ್ಲಿ ನೀವು ತಂಡದ ಜೊತೆಗೆ ಕೆಲಸ ಮಾಡುವ ಅವಕಾಶಗಳು ಸಿಗುತ್ತವೆ. ಎಸ್.ಡಿ.ಎಂ. ಕಾಲೇಜು ಇಂತಹ ಹೇರಳ ಅವಕಾಶಗಳನ್ನು ನೀಡುತ್ತದೆ. ಅವುಗಳನ್ನು ಬಳಸಿಕೊಳ್ಳಿ. ತಂಡಸ್ಫೂರ್ತಿಯೊಂದಿಗೆ ಕೆಲಸ ಮಾಡಿ” ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಓದಿನ ಜೊತೆಗೆ ಇಂತಹ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗುತ್ತವೆ ಎಂದರು.
ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥ ಶೈಲೇಶ್ ಕುಮಾರ್, ಕಾರ್ಯಕ್ರಮ ಸಂಯೋಜಕರಾದ ಹರಿಣಿ, ಅಕ್ಷತಾ ಜೈನ್, ಐಟಿ ಕ್ಲಬ್ ಜಂಟಿ ಕಾರ್ಯದರ್ಶಿ ನೀರಜ್ ಎನ್.ಕೆ., ವಿಜ್ಞಾನ ಸಂಯೋಜಕ ವರುಣ್ ಉಪಸ್ಥಿತರಿದ್ದರು.
ಐಟಿ ಕ್ಲಬ್ ಕಾರ್ಯದರ್ಶಿ ಮೊನಾಲ್ ಜಿಯಾ ಸ್ವಾಗತಿಸಿ, ಅಧ್ಯಕ್ಷೆ ಅಂಕಿತಾ ಶೆಟ್ಟಿ ವಂದಿಸಿದರು.







