ಉಜಿರೆ: ಬೆನ್ನುನೋವು ಮತ್ತು ಕಾಲಿನ ಸ್ನಾಯುಗಳ ಸೆಳೆತದಿಂದ ಬಳಲುತ್ತಿದ್ದು, ನಡೆದಾಡಲು ಕಷ್ಟಪಡುತ್ತಿದ್ದ ೪೯ ವರ್ಷ ಪ್ರಾಯದ ಮಹಿಳೆಯೊಬ್ಬರು ಇತ್ತೀಚೆಗೆ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಇಲ್ಲಿನ ಬೆನ್ನುಮೂಳೆಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಶತಾನಂದ ಪ್ರಸಾದ್ ರಾವ್ ಇವರ ಸೂಚನೆಯಂತೆ ರೋಗಿಯನ್ನು ಎಂ.ಆರ್.ಐ ಸ್ಕಾನಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಡಿ ೧೧ ಬೆನ್ನುಮೂಳೆಯಲ್ಲಿ ದ್ರವ ತುಂಬಿದ ಚೀಲಗಳು (ಅರಕ್ನಾಯಿಡ್ ಸಿಸ್ಟ್) ಇರುವುದು ಪತ್ತೆಯಾಗಿತ್ತು.

ಎಂಡೋಸ್ಕೋಪಿಕ್ ಸ್ಪೆನ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆದಿರುವ ಖ್ಯಾತ ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಮಹೇಶ್. ಕೆ, ಇವರು ಈ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು. ಡಾ| ಮಹೇಶ್. ಕೆ ಇವರು
ಬೆನ್ನುಹುರಿಯ ದ್ರವ ತುಂಬಿದ ಚೀಲಗಳನ್ನು ಎಂಡೋಸ್ಕೋಪಿ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವಿಶ್ವದ ಮೊದಲ ಸರ್ಜನ್ ಎಂದು ಖ್ಯಾತಿಯನ್ನು ಪಡೆದಿದ್ದಾರೆ. ಎಂಡೋಸ್ಕೋಪಿ ಸಾಧನವನ್ನು ತನ್ನದೇ
ಕೌಶಲ್ಯ ಮತ್ತು ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿರುವ ಇವರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ೧೫ ವರ್ಷಗಳ ಸುಧೀರ್ಘ ಅನುಭವ ಹೊಂದಿದ್ದಾರೆ.

ಇವರೊಂದಿಗೆ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಬೆನ್ನುಮೂಳೆಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಶತಾನಂದ ಪ್ರಸಾದ್ ರಾವ್, ಅರೆವಳಿಕೆ ತಜ್ಞರಾದ ಡಾ| ಚೈತ್ರಾ. ಆರ್ ನೇತೃತ್ವದ ತಜ್ಞ ವೈದ್ಯರ
ತಂಡ ಸಹಕರಿಸಿದರು. ಡಾ| ಮಹೇಶ್. ಕೆ, ಇವರು ಶಸ್ತ್ರಚಿಕಿತ್ಸೆಯ ವಿಧಾನವನ್ನು ವಿವರಿಸುತ್ತಾ, ಸಂಪೂರ್ಣ ಎಂಡೋಸ್ಕೋಪಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಕೇವಲ ೮ ಮಿ.ಮೀ ಛೇದನದೊಂದಿಗೆ ೨ ಸೆ.ಮೀ ಗಾತ್ರದ ದ್ರವ ತುಂಬಿದ ಚೀಲಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಈ ಶಸ್ತ್ರಚಿಕಿತ್ಸೆಯು ಹೆಚ್ಚಿನ ರಕ್ತಸ್ರಾವವಾಗದಂತೆ ಹಾಗೂ ಇತರೆ ಅಂಗಗಳಿಗೆ ಹಾನಿಯಾಗದಂತೆ ನಡೆಸಲ್ಪಡುವ ನೋವು ರಹಿತ ಮತ್ತು ಹೊಲಿಗೆಯ ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಯಾಗಿದೆ. ಬೆನ್ನುಹುರಿಯ ಕಾಲುವೆಯೊಳಗೆ ದ್ರವ ತುಂಬಿದ ಚೀಲಗಳು ಬೆಳೆಯುವುದರಿಂದ ಬೆನ್ನುಹುರಿಯನ್ನು ಸಂಕುಚಿತಗೊಳಿಸುತ್ತವೆ ಮತ್ತು ನರಗಳ ಮೇಲೆ
ಒತ್ತಡವನ್ನು ಬೀರುವುದರಿಂದ ರೋಗಿಗೆ ತೀವ್ರ ಬೆನ್ನುನೋವು ಉಂಟುಮಾಡುತ್ತದೆ. ದ್ರವ ತುಂಬಿದ ಚೀಲಗಳು ಬೆಳೆದಂತೆ ರೋಗಿಗೆ ಬೆನ್ನುನೋವು, ಕಾಲುಗಳ ಸೆಳೆತದಿಂದ ನಡೆದಾಡಲು ಕಷ್ಟವಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಂಡೋಸ್ಕೋಪಿಕ್ ಸರ್ಜರಿ ಮಾಡುವುದರಿಂದ ರೋಗಿಯು ಶಸ್ತ್ರಚಿಕಿತ್ಸೆ ಸಮಯದಲ್ಲಿ ಮತ್ತು ನಂತರವೂ ಕಡಿಮೆ ನೋವನ್ನು ಹೊಂದಿರುತ್ತಾರೆ. ಶಸ್ತ್ರಚಿಕಿತ್ಸೆಯನ್ನು ಕೇವಲ ೮ ಮಿ.ಮೀ ಛೇಧನದ ಮೂಲಕ ಕ್ಯಾಮರಾ ಸಹಿತ ಎಂಡೋಸ್ಕೋಪಿಕ್ ರವಾನಿಸಲಾಗುತ್ತದೆ. ಮತ್ತು ದ್ರವ ತುಂಬಿದ ಚೀಲಗಳನ್ನು ತೆಗೆದು ಹಾಕಲಾಗುತ್ತದೆ. ಇದರಿಂದ ರೋಗಿಯೂ ಚೇತರಿಸಿಕೊಳ್ಳಲು ಮತ್ತು ದಿನನಿತ್ಯದ ಚಟುವಟಿಕೆಗಳಿಗೆ ಬೇಗನೇ ಮರಳಲು ಸಹಾಯ ಮಾಡುತ್ತದೆ. ಇದು ಕನಿಷ್ಟ ರಕ್ತದ ನಷ್ಟದೊಂದಿಗೆ ಯಾವುದೇ ಅಂಗಾಂಶ ಹಾನಿಯನ್ನು ಉಂಟು ಮಾಡದೇ ನೋವು ರಹಿತವಾಗಿದೆ. ಈ ರೋಗಿಯು
ಕೇವಲ ಒಂದೇ ದಿನದಲ್ಲಿ ಡಿಸ್ಚಾರ್ಜ್ ಕೂಡ ಆಗಿದ್ದಾರೆ. ಪ್ರಸ್ತುತ ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ ಎಂದರು.

ಇದೇ ವೈದ್ಯರ ತಂಡ ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಇಂಟ್ರಾ ಡ್ಯೂರಲ್ ಸ್ಪೈನಲ್ ಟ್ಯೂಮರ್ ಶಸ್ತ್ರಚಿಕಿತ್ಸೆ ಮತ್ತು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ
ಗುರುತಿಸಿಕೊಂಡಿದ್ದರು. ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್
ಇವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ, ನುರಿತ ತಜ್ಞ ವೈದ್ಯರ ತಂಡದಿಂದ ಇಲ್ಲಿ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ
ತಿಳಿಸಿದರು.




