ಬೆಳ್ತಂಗಡಿ: ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಿದ್ಧಪಡಿಸಲಾದ “ಅರಿವು ರಸ್ತೆ ನಿಯಮ ಪಾಲಿಸಿ” ಎಂಬ ಸಾಮಾಜಿಕ ಸಂದೇಶದ ವಿಶೇಷ ಹಾಡನ್ನು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಬೆಳ್ತಂಗಡಿ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಕಿಶೋರ್ ಅವರು ಈ ಹಾಡನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿ, ಶುಭ ಹಾರೈಸಿದರು.
ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರು ಶಿಸ್ತಿನಿಂದ ವಾಹನ ಚಲಾಯಿಸುವಂತೆ ಪ್ರೇರೇಪಿಸಲು ಈ ಹಾಡನ್ನು ರೂಪಿಸಲಾಗಿದೆ.
ಈ ಗೀತೆಗೆ ಸಂಗೀತ ಲೋಕದ ಖ್ಯಾತ ನಿರ್ದೇಶಕ ಮನು ಉಜಿರೆ ಅವರು ಸಂಗೀತ ನೀಡಿದ್ದಾರೆ. ವಿಡಿಯೋ ಸಂಕಲನದ ಜವಾಬ್ದಾರಿಯನ್ನು ಪೃಥ್ವಿ ರಾಜ್ ಶೆಟ್ಟಿ ಉಜಿರೆ ನಿರ್ವಹಿಸಿದ್ದಾರೆ.
ಈ ಜಾಗೃತಿ ಅಭಿಯಾನಕ್ಕೆ ಬೆಳ್ತಂಗಡಿಯ ದ್ವಾರಕ ಡ್ರೈವಿಂಗ್ ಸ್ಕೂಲ್ ನಿರ್ಮಾಣ ಸಹಕಾರ ನೀಡಿದೆ.
ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು, ಸಂಗೀತ ನಿರ್ದೇಶಕರು ಹಾಗೂ ತಾಂತ್ರಿಕ ತಂಡದ ಸದಸ್ಯರು ಉಪಸ್ಥಿತರಿದ್ದರು. ಈ ಜಾಗೃತಿ ಗೀತೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆಯುವ ನಿರೀಕ್ಷೆಯಿದೆ.





