ಕೋಲ್ಕತಾ : ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕಿ ಚುನಾವಣೆ ಪೂರ್ಣಗೊಂಡ 293 ಕ್ಷೇತ್ರಗಳಲ್ಲಿ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಬಂಗಾಳದಲ್ಲಿ ಮೊತ್ತಮೊದಲ ಬಾರಿಗೆ ಬಿಜೆಪಿ ಅಧಿಕಾರ ಸ್ಥಾಪಿಸುವ ಸನ್ನಾಹದಲ್ಲಿದೆ. ಕಳೆದ ಎರಡು ಚುನಾವಣೆಗಳಿಂದ ಬಂಗಾಳದಲ್ಲಿ ಸಾಕಷ್ಟು ಇದ್ದ ಕೇಸರಿ ಹವಾ ಈ ಬಾರಿ ಬಿಜೆಪಿಯನ್ನು ಗದ್ದುಗೆಗೆ ಏರಿಸುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಆದ 148 ಅನ್ನು ಬಿಜೆಪಿ ದಾಟುವ ಸಾಧ್ಯತೆ ದಟ್ಟವಾಗಿದೆ. ಸುಮಾರು 160ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ದೀದಿ ನೇತೃತ್ವದ ಟಿಎಂಸಿಗೆ ಹಿನ್ನಡೆ
ಕಳೆದ ಒಂದು ದಶಕದಿಂದ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸದ್ಯ 100ರ ಆಸುಪಾಸಿನಲ್ಲಿ ಸ್ಥಾನಗಳಲ್ಲಿ ಮುನ್ನಡೆ ಪಡೆದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಭವಾನಿಪುರ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ, ನಂತರದ ಸುತ್ತುಗಳಲ್ಲಿ ಅಲ್ಪ ಮುನ್ನಡೆ ಸಾಧಿಸಿದ್ದಾರೆ.
ಬಂಗಾಳದಲ್ಲಿ ಟಿಎಂಸಿ ಅಲೆ ಎದ್ದು ದೀದಿಯನ್ನು ಮುಖ್ಯಮಂತ್ರಿ ಗದ್ದುಗೆಗೆ ಕೂರಿಸುವಂತೆ ಮಾಡಿದ ನಂದಿಗ್ರಾಮದಲ್ಲಿ ಈಗ ಬಿಜೆಪಿಯ ಸುವೇಂದು ಹವಾ ಇದೆ. ಮಾಜಿ ಟಿಎಂಸಿ ನೇತಾರರಾದ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಮುನ್ನಡೆಯನ್ನು ಮುಂದುವರಿಸಿದ್ದಾರೆ.
ಹ್ಯುಮಾಯೂನ್ ಕಬೀರ್ ಅವರ ಹೊಸ ಪಕ್ಷ ಮತ್ತು ಎಡರಂಗ-ಕಾಂಗ್ರೆಸ್ ಮೈತ್ರಿಕೂಟ ಬಹುತೇಕ ನೆಲಕಚ್ಚಿವೆ. ಕಾಂಗ್ರೆಸ್ ಮೈತ್ರಿಕೂಟ ಕೇವಲ 1 ಸ್ಥಾನದಲ್ಲಿ ಮುನ್ನಡೆ ಹೊಂದಿದೆ.
ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ವಿವರ
ಒಟ್ಟು ವಿಧಾನಸಭಾ ಕ್ಷೇತ್ರಗಳು: 294
ಮತ ಎಣಿಕೆ ಆಗುತ್ತಿರುವುದು: 293
ಬಹುಮತಕ್ಕೆ ಬೇಕಾಗಿರುವುದು: 148 ಸ್ಥಾನ
ಎನ್ಡಿಎ: 166 ಕ್ಷೇತ್ರಗಳಲ್ಲಿ ಮುನ್ನಡೆ
ಟಿಎಂಸಿ: 101 ಕ್ಷೇತ್ರಗಳಲ್ಲಿ ಮುನ್ನಡೆ
ಕಾಂಗ್ರೆಸ್-ಎಡರಂಗ: 0
ಬದಲಾವಣೆಗೆ ಕಾರಣವಾದ ಅಂಶಗಳು?
ಪಶ್ಚಿಮ ಬಂಗಾಳದಲ್ಲಿ ದೀದಿ ವಿರೋಧಿ ಅಲೆ ಏಳಲು ಮೂರು ಕಾರಣಗಳಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲನೆಯದು ಮತದಾರರ ಪಟ್ಟಿ ಪರಿಷ್ಕರಣೆ (SIR) ವಿಚಾರ. ಎರಡನೆಯದು ಹಿಂದೂ ಮತಗಳ ಧ್ರುವೀಕರಣ. ಮೂರನೆಯದು, ಆಡಳಿತ ವಿರೋಧಿ ಅಲೆ.
ಚುನಾವಣಾ ಆಯೋಗ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆಯಿಂದ ಸುಮಾರು 89 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇದು ಚುನಾವಣಾ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.







