ಮುಂಬೈ: ಮುಂಬೈನ ಪೈಧೋನಿ ಪ್ರದೇಶದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವಿನ ಪ್ರಕರಣಕ್ಕೆ ಕೊನೆಗೂ ಸ್ಪಷ್ಟನೆ ಸಿಕ್ಕಿದೆ. ಅಬ್ದುಲ್ಲಾ ಡೊಕಾಡಿಯಾ, ಅವರ ಪತ್ನಿ ನಸ್ರಿನ್ ಮತ್ತು ಇಬ್ಬರು ಪುತ್ರಿಯರಾದ ಆಯೇಷಾ ಹಾಗೂ ಜೈನೆಬ್ ಅವರ ಸಾವಿಗೆ ಕಲ್ಲಂಗಡಿ ಹಣ್ಣು (Watermelon) ಕಾರಣವಲ್ಲ ಎಂಬುದು ವಿಧಿವಿಜ್ಞಾನ ವರದಿಯಲ್ಲಿ ದೃಢಪಟ್ಟಿದೆ. ಆರಂಭದಲ್ಲಿ ಕಲ್ಲಂಗಡಿ ತಿಂದಿದ್ದಕ್ಕೆ ಫುಡ್ ಪಾಯಿಸನ್ (Food Poisoning) ಆಗಿರಬಹುದು ಎಂಬ ಅನುಮಾನವಿತ್ತು, ಆದರೆ ಈಗ ಲಭ್ಯವಾಗಿರುವ ವರದಿಗಳು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿವೆ.
ಮೃತ ದೇಹಗಳ ವಿಸ್ಸೆರಾ ಮಾದರಿಗಳನ್ನು ಪರೀಕ್ಷಿಸಿದ ವಿಧಿವಿಜ್ಞಾನ ತಜ್ಞರು (Forensic Experts), ಅವರ ದೇಹದಲ್ಲಿ ಜಿಂಕ್ ಫಾಸ್ಫೈಡ್ (Zinc Phosphide) ಎಂಬ ವಿಷಕಾರಿ ಅಂಶ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಇದು ಸಾಮಾನ್ಯವಾಗಿ ಇಲಿಗಳನ್ನು ಕೊಲ್ಲಲು ಬಳಸುವ ಅತ್ಯಂತ ಅಪಾಯಕಾರಿ ವಿಷವಾಗಿದೆ. ಈ ವಿಷ ದೇಹದೊಳಗೆ ಹೋದ ಕೆಲವೇ ಗಂಟೆಗಳಲ್ಲಿ ಪ್ರಾಣಕ್ಕೆ ಕುತ್ತು ತರುತ್ತದೆ. ಹಾಗಾಗಿ, ಇಡೀ ಕುಟುಂಬದ ಸಾವಿಗೆ ಈ ಇಲಿ ಪಾಷಾಣವೇ ಅಸಲಿ ಕಾರಣ ಎಂಬುದು ಈಗ ಬಹಿರಂಗವಾಗಿದೆ.
ಏಪ್ರಿಲ್ 25ರ ರಾತ್ರಿ ಇಸ್ಮಾಯಿಲ್ ಕುರ್ತೆ ರಸ್ತೆಯ ಘಾರಿ ಮೊಹಲ್ಲಾದಲ್ಲಿರುವ ಡೊಕಾಡಿಯಾ ಕುಟುಂಬವು ಒಂದು ಗೆಟ್-ಟು-ಗೆದರ್ (Get-together) ಆಯೋಜಿಸಿತ್ತು. ನೆಂಟರೆಲ್ಲಾ ಸೇರಿ ಬಿರಿಯಾನಿ ಊಟ ಮಾಡಿದ್ದರು. ಅತಿಥಿಗಳು ಹೋದ ನಂತರ, ಅಂದರೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಕುಟುಂಬದ ಸದಸ್ಯರೆಲ್ಲಾ ಸೇರಿ ಕಲ್ಲಂಗಡಿ ಹಣ್ಣನ್ನು ತಿಂದಿದ್ದಾರೆ. ಆದರೆ ಆ ಹಣ್ಣಿನಲ್ಲಿ ವಿಷವಿತ್ತೇ ಅಥವಾ ಬೇರೆ ಯಾವುದರ ಮೂಲಕ ವಿಷ ದೇಹ ಸೇರಿತ್ತೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ, ಅಂದರೆ ಏಪ್ರಿಲ್ 26ರ ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ನಾಲ್ವರಿಗೂ ವಿಪರೀತ ವಾಂತಿ ಮತ್ತು ಭೇದಿ (Diarrhoea) ಶುರುವಾಗಿದೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸಂಬಂಧಿಕರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಜೆಜೆ ಆಸ್ಪತ್ರೆಗೆ (JJ Hospital) ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಸಾವನ್ನಪ್ಪಿದ್ದಾರೆ.ಪ್ರಸ್ತುತ ಈ ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ಜೆಜೆ ಮಾರ್ಗ್ ಪೊಲೀಸ್ ಠಾಣೆಯ (Police Station) ಅಧಿಕಾರಿಗಳು ವಹಿಸಿಕೊಂಡಿದ್ದಾರೆ. ಮೃತರ ಸಂಬಂಧಿಕರು, ನೆರೆಹೊರೆಯವರು ಮತ್ತು ಆ ರಾತ್ರಿ ಮನೆಗೆ ಬಂದಿದ್ದ ಅತಿಥಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಸಣ್ಣ ಸುಳಿವನ್ನು ಬೆನ್ನತ್ತಿರುವ ಪೊಲೀಸರು, ಸಾವಿನ ಹಿಂದಿನ ಅಸಲಿ ಪಿತೂರಿ ಅಥವಾ ಆಕಸ್ಮಿಕದ ಬಗ್ಗೆ ಶೀಘ್ರವೇ ಸ್ಪಷ್ಟ ಚಿತ್ರಣ ನೀಡಲಿದ್ದಾರೆ.
ಈ ಸುದ್ದಿಯಿಂದ ಕಲ್ಲಂಗಡಿ ಹಣ್ಣು ತಿನ್ನಲು ಹೆದರುತ್ತಿದ್ದ ಜನರಿಗೆ ಸ್ವಲ್ಪ ಸಮಾಧಾನ ಸಿಕ್ಕಂತಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಷ ಇರುವುದಿಲ್ಲ, ಬದಲಾಗಿ ಬೇರೆ ಮೂಲಗಳಿಂದ ಇಲಿ ಪಾಷಾಣವು ಕುಟುಂಬದ ಸದಸ್ಯರ ಹೊಟ್ಟೆ ಸೇರಿದೆ ಎಂದು ಅಧಿಕಾರಿಗಳು (Officials) ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಹಣ್ಣುಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡಬೇಡಿ ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ.ನಗುನಗುತಾ ಬಿರಿಯಾನಿ ಊಟ ಮಾಡಿ ಗೆಳೆಯರು-ಸಂಬಂಧಿಕರ ಜೊತೆ ಕಾಲ ಕಳೆದಿದ್ದ ಆ ಕುಟುಂಬ, ಬೆಳಿಗ್ಗೆ ಹೊತ್ತಿಗೆ ಶವವಾಗಿ ಮಾರ್ಪಟ್ಟಿದ್ದು ಇಡೀ ಮುಂಬೈ ಅನ್ನೇ ನಡುಗಿಸಿದೆ. ಹಿರಿಯರು, ಕಿರಿಯರು ಎನ್ನದೆ ಎಲ್ಲರನ್ನೂ ಬಲಿಪಡೆದ ಈ ಜಿಂಕ್ ಫಾಸ್ಫೈಡ್ ಎಂಬ ಮೃತ್ಯು, ಆ ಮನೆಯೊಳಗೆ ಹೇಗೆ ಪ್ರವೇಶಿಸಿತು ಎಂಬುದು ಬಯಲಾಗಬೇಕಿದೆ. ಸದ್ಯಕ್ಕೆ ಈ ನಿಗೂಢ ಸಾವಿನ ರಹಸ್ಯ (Mystery Solved) ಬಯಲಾಗಿದ್ದು, ತನಿಖೆ ಮುಂದುವರಿದಿದೆ.





