ಕಾರ್ಕಳ: ಕಾರ್ಕಳದ ಕಸಬಾ ಗ್ರಾಮದಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ವಾಹನ ಡಿಕ್ಕಿಯಾದ ರಭಸಕ್ಕೆ ಪಾದಚಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದುರಂತವೆಂದರೆ ಡಿಕ್ಕಿ ಹೊಡೆದ ವಾಹನ ಸವಾರ ಮಾನವೀಯತೆಯನ್ನೇ ಮರೆತು ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತರನ್ನು ಕರಿಯಕಲ್ಲು ಮಿಯಾರು ನಿವಾಸಿ ಪ್ರಸಾದ್ ಶೆಟ್ಟಿ (36 ವರ್ಷ) ಎಂದು ಗುರುತಿಸಲಾಗಿದೆ.
ಈ ಸಂಬಂಧ ಮೃತರ ಸಹೋದರ ರವೀಂದ್ರ ಶೆಟ್ಟಿ (51) ಅವರು ದೂರು ನೀಡಿದ್ದು, ಮೇ 12ರಂದು ರಾತ್ರಿ 10.30ರಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ಪ್ರಸಾದ್ ಶೆಟ್ಟಿ ರಸ್ತೆ ದಾಟುತ್ತಿದ್ದ ವೇಳೆ, ಅಪರಿಚಿತ ವಾಹನದ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ತೀವ್ರತೆಗೆ ಪ್ರಸಾದ್ ಶೆಟ್ಟಿ ರಸ್ತೆ ಮೇಲೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ವಾಹನ ಚಾಲಕ ಸ್ಥಳದಲ್ಲಿ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







