ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಖತರ್ನಾಕ್ ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಜಿಲ್ಲಾ ಕ್ರೈಂ ಡಿಟೆಕ್ಷನ್ ಪೊಲೀಸ್ ತಂಡ ಯಶಸ್ವಿಯಾಗಿದೆ. ಬಂಧಿತರಿಂದ ಕಳವು ಮಾಡಲಾಗಿದ್ದ ಭಾರಿ ಪ್ರಮಾಣದ ಚಿನ್ನಾಭರಣ, ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.




ಬಂಧಿತ ಆರೋಪಿಗಳನ್ನು ಹಮೀದ್ ಅಲಿಯಾಸ್ ಅಬ್ದುಲ್ ಹಮೀದ್ ಮತ್ತು ಅಬ್ದುಲ್ ಜಾಬೀರ್ ಅಲಿಯಾಸ್ ಜಾಬಿ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ನಿವಾಸಿ ಡಿ. ಮುರಳಿ ಅವರ ಮನೆಯಲ್ಲಿ ಕಳೆದ ಏಪ್ರಿಲ್ 5ರಂದು ಭಾರಿ ಕಳ್ಳತನ ನಡೆದಿತ್ತು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿದ ಪೊಲೀಸರು, ಮೇ 15ರಂದು ಮೊದಲ ಆರೋಪಿ ಹಮೀದ್ನನ್ನು ಆಲ್ಟೊ ಕಾರು ಸಮೇತ ವಶಕ್ಕೆ ಪಡೆದಿದ್ದರು. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸಿಕ್ಕ ಪ್ರಮುಖ ಸುಳಿವಿನ ಆಧಾರದ ಮೇಲೆ, ಜೂನ್ 7ರಂದು ಮತ್ತೊಬ್ಬ ಆರೋಪಿ ಅಬ್ದುಲ್ ಜಾಬೀರ್ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ವಶಪಡಿಸಿಕೊಂಡ ಸೊತ್ತಿನ ವಿವರ:
ಬಂಧಿತ ಇಬ್ಬರು ಆರೋಪಿಗಳಿಂದ ಒಟ್ಟು ₹20.67 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.
- ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಕಳ್ಳತನಕ್ಕೆ ಸಂಬಂಧಿಸಿದ 68.690 ಗ್ರಾಂ ಚಿನ್ನಾಭರಣ.
- ₹2 ಲಕ್ಷ ನಗದು ಹಣ.
-ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ 21.810 ಗ್ರಾಂ ಚಿನ್ನಾಭರಣ.
-ಕೃತ್ಯಕ್ಕೆ ಬಳಸಲಾಗಿದ್ದ ಒಂದು ಮಾರುತಿ ಸ್ವಿಫ್ಟ್ ಮತ್ತು ಒಂದು ಆಲ್ಟೊ ಕಾರು.
ಪೊಲೀಸ್ ಮೂಲಗಳ ಮಾಹಿತಿ:
“ಆರೋಪಿಗಳು ಕೇವಲ ದಕ್ಷಿಣ ಕನ್ನಡ ಮಾತ್ರವಲ್ಲದೆ, ನೆರೆರಾಜ್ಯ ಕೇರಳದಲ್ಲೂ ಕಳ್ಳತನ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಜಿಲ್ಲೆಯ ಉಪ್ಪಿನಂಗಡಿ, ಬೆಳ್ತಂಗಡಿ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ಕಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದು, ತನಿಖೆ ಮುಂದುವರಿದಿದೆ.”
ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕೆ. ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.




