ಬೆಳ್ತಂಗಡಿ: ಬೆಳ್ತಂಗಡಿಯ ಮಚ್ಚಿನ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ದುರಂತ ಅಂತ್ಯ ಕಂಡಿದ್ದಾರೆ. ಬಳ್ಳಮಂಜ-ಪಣಕಜೆ ರಸ್ತೆಯ ಪಾಲ್ಯರ ಎಂಬಲ್ಲಿ ಆಕ್ಟಿವಾ ಸ್ಕೂಟರ್ ಮತ್ತು ಪಿಕಪ್ ವಾಹನದ ನಡುವೆ ಈ ಭೀಕರ ಅಪಘಾತ ನಡೆದಿದೆ.




ಇದನ್ನೂ ಓದಿ : ಒಂದು ಹೇಳಿಕೆ, ಭಾರೀ ವಿವಾದ..!! ಪ್ರತಿಭಾ ಕುಳಾಯಿ – ಅನಿತಾ ಕಾಸರಗೋಡು ಸಂಭಾಷಣೆ ವೈರಲ್
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಆಕ್ಟಿವಾ ಸ್ಕೂಟರ್ ಸಂಪೂರ್ಣವಾಗಿ ಜಖಂಗೊಂಡಿದೆ. ದುರಂತದಲ್ಲಿ ಸ್ಕೂಟರ್ನ ಹಿಂಬದಿ ಸವಾರರಾಗಿದ್ದ ಚಂದಪ್ಪ ಮೂಲ್ಯ ಅವರು ತಲೆ ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇನ್ನು ಸ್ಕೂಟರ್ ಚಲಾಯಿಸುತ್ತಿದ್ದ ಡಾಕಯ್ಯ ಗೌಡ ಅವರು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಪಘಾತ ನಡೆದಿದ್ದು ಹೇಗೆ?
ಮಡಂತ್ಯಾರಿನ ಶಾಮಿಯಾನ ಸಂಸ್ಥೆಗೆ ಸೇರಿದ ಪಿಕಪ್ ವಾಹನವೊಂದು ಬಳ್ಳಮಂಜದಿಂದ ಪಣಕಜೆ ಕಡೆಗೆ ಸಾಗುತ್ತಿತ್ತು. ಇದೇ ವೇಳೆ ಪಣಕಜೆಯಿಂದ ಬಳ್ಳಮಂಜ ಕಡೆಗೆ ಬರುತ್ತಿದ್ದ ಆಕ್ಟಿವಾ ಸ್ಕೂಟರ್ಗೆ ಪಾಲ್ಯರ ಎಂಬಲ್ಲಿ ಈ ಪಿಕಪ್ ವಾಹನವು ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.




