ಬೆಂಗಳೂರು: ರಾಜ್ಯದ ನಾಯಕತ್ವದ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ. ಶೀಘ್ರದಲ್ಲಿಯೇ ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆಯಾಗಲಿದ್ದು, 4 ಮಂದಿ ಡಿಸಿಎಂ ಆಗಿ ಅಧಿಕಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ಮಂಗಳವಾರ ನಡೆಸಲಾದ ಸರಣಿ ಸಭೆಗಳಲ್ಲಿಕರ್ನಾಟಕದ ನಾಯಕತ್ವದ ಸಂಘರ್ಷಕ್ಕೆ ಪರಿಹಾರ ಸೂತ್ರವನ್ನು ಹೈಕಮಾಂಡ್ ರಚಿಸಿದೆ. ಈ ಕುರಿತು ಸಿಎಂ ಹಾಗೂ ಡಿಸಿಎಂಗೂ ಮಾಹಿತಿ ನೀಡಿದೆ.
ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕರೆಸಿಕೊಂಡು, ರಾಜ್ಯ ನಾಯಕತ್ವವನ್ನು ಬದಲಾಯಿಸುವ ರಾಹುಲ್ ಗಾಂಧಿ ಅವರ ಮಾತಿಗೆ ಸಿದ್ದರಾಮಯ್ಯ ಭಾಗಶಃ ಒಪ್ಪಿದ್ದು, ರಾಜ್ಯ ರಾಜಕಾರಣದಲ್ಲಿಯೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯ ನಾಯಕತ್ವವನ್ನು ಗೌರವಯುತವಾಗಿಯೇ ಬದಲಾಯಿಸಲು ಎಲ್ಲವ್ಯವಸ್ಥೆ ಮಾಡಿಕೊಂಡಿದೆ.







