ಬೆಳ್ತಂಗಡಿ: ಕನಸ್ಸುಗಳಿಲ್ಲದ ಬದುಕು ನಮ್ಮನ್ನು ಅತ್ಯಂತ ಸಾಮಾನ್ಯರನ್ನಾಗಿಸುತ್ತಿದೆ. ಕನಸುಗಳು ಹುಟ್ಟಲು ಕುತೂಹಲ ಬೆಳೆಯಬೇಕು. ಭಾರತೀಯ ತರುಣರು ಕ್ರಿಯಾಶೀಲತೆಯ ಕೌಶಲ್ಯವಂತರಾಗಲು ತನ್ನ ವಿದ್ಯಾರ್ಥಿ ಜೀವನದಿಂದಲೇ ದೃಢವಾದ ಪ್ರಯತ್ನ ಮತ್ತು ಕನಸ್ಸುಗಳೊಂದಿಗೆ ಸಾಗಬೇಕು ಎಂದು ಷ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾ ಕಂಪನಿಯ ಉಪಾಧ್ಯಕ್ಷರಾದ ದೇವ್ ದಾಸ್ ಶೆಟ್ಟಿ ಅಭಿಪ್ರಾಯಪಟ್ಟರು.
ಇವರು ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ನವೀಕೃತ ಅತ್ಯಾಧುನಿಕ ಕೈಗಾರಿಕಾ ಸಮಗ್ರ ಉಪಕರಣಗಳ ಕಾರ್ಯಗಾರ ಕೇಂದ್ರದ ಉದ್ಘಾಟನಾ ಸಭಾ ಕಾರ್ಯಕ್ರಮದ ಮುಖ್ಯ ಉದ್ಘಾಟಕರಾಗಿ ಮಾತನಾಡಿದರು.

ಪ್ರತಿಯೊಂದು ತಯಾರಿಕೆಯಲ್ಲಿ ಮೇಡ್ ಇನ್ ಇಂಡಿಯಾ ಸಾಕಾರಗೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯ ಕೊಡುಗೆ ಅಗತ್ಯ. ಇಲ್ಲಿ ನಿರ್ಮಿತ ಗೊಳ್ಳುವ ಉಪಕರಣಗಳು ಇಂಡಿಯಾ ಫಾರ್ ಇಂಡಿಯಾ ಮಹತ್ವಾಕಾಂಕ್ಷೆಯ ಜೊತೆಗೆ ಇಂಡಿಯಾ ಫಾರ್ ಗ್ಲೋಬಲ್ ಎಂಬ ಮಹತ್ವದ ಗುರಿಯೊಂದಿಗೆ ಸಾಗಬೇಕು. ಉತ್ಕೃಷ್ಟ ಮತ್ತು ಗುಣಮಟ್ಟದ ಉಪಕರಣಗಳು ತಯಾರಾದಾಗ ಮಾತ್ರ ಇದು ಸಾಧ್ಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಸ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾ ಕಂಪನಿಯ ಸಿಎಸ್ಆರ್ ವಿಭಾಗದ ಡಿಜಿಎಂ ಪ್ರಶಾಂತ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಯುತವಾದ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು. ನಿಶ್ಚಲವಾದ ಗುರಿ ಮತ್ತು ಮನಸಿದ್ದರೆ ಕಲೆ ಕರಗತವಾಗುತ್ತದೆ. ಉದ್ದಿಮೆ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳನ್ನು ತೆರೆಯುವ ಜೊತೆಗೆ ನಾವು ಉದ್ಯೋಗದಾತರಾಗಿ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಂಘ ಸಂಸ್ಥೆಗಳು ಕೊಡಮಾಡುವ ಸಹಕಾರಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಗುರು ಹಿರಿಯರ ಅನುಭವ ಮತ್ತು ಬುದ್ಧಿ ಮಾತುಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ಜವಾಬ್ದಾರಿವಂತರಾದಾಗ ಬಹು ಎತ್ತರಕ್ಕೆ ತಲುಪುತ್ತಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರು ತನ್ನ ಬಾಲ್ಯದ 19 ವರ್ಷಕ್ಕೆ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತು ಇಂದು ಈ ಸ್ಥಾನ ಮಾನಕ್ಕೆ ತಲುಪಿದ್ದಾರೆ. ಇದು ನಮಗೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ
ವಿಶ್ವೇಶ್ವರ ಪ್ರಸಾದ್ ಕೆ. ಆರ್ ಪ್ರಾಸ್ತಾವಿಕ ಮಾತುಗಳನ್ನಾಡಿ, 30 ವಿದ್ಯಾರ್ಥಿಗಳಿಂದ ಆರಂಭವಾದ ವೇಣೂರಿನ ಕೈಗಾರಿಕಾ ತರಬೇತಿ ಸಂಸ್ಥೆ ಇಂದು 300 ವಿದ್ಯಾರ್ಥಿಗಳತ್ತ ತಲುಪಿದೆ. ಪ್ರತಿ ವರ್ಷ ನೂರು ಶೇಕಡಾ ದಾಖಲಾತಿಯ ಜೊತೆಗೆ ವಿದ್ಯಾರ್ಥಿಗಳಿಗೆ ನೂರು ಶೇಕಡಾ ಪ್ಲೇಸ್ ಮೆಂಟ್ ವ್ಯವಸ್ಥೆಯನ್ನು ಮಾಡಿಕೊಡುತ್ತಿದೆ. ಈಗಾಗಲೇ ಸಂಸ್ಥೆಯು ಟೊಯೋಟಾ, ಸ್ನೇಯ್ಡರ್ ಎಲೆಕ್ಟ್ರಾನಿಕ್ಸ್, ಬೋಶ್ ತರಹದ 6 ಕ್ಕೂ ಅಧಿಕ ಅಂತಾರಾಷ್ಟ್ರೀಯ ಕಂಪೆನಿಗಳ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಸ್ನೇಯ್ಡರ್ ಎಲೆಕ್ಟ್ರಾನಿಕ್ಸ್ ನಂತಹ ಸಂಸ್ಥೆ ಇಂದು ತನ್ನ ಸಿಎಸ್ಆರ್ ಆಶ್ರಯದಲ್ಲಿ ಸುಮಾರು 22 ಲಕ್ಷ ಮೌಲ್ಯದ ವಿದ್ಯುತ್ ಉಪಕರಣಗಳನ್ನು ತರಬೇತಿ ಕಾರ್ಯಾಗಾರ ಕೇಂದ್ರದಕ್ಕೆ ಕೊಡುಗೆಯಾಗಿ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಉಪಕಾರಿಯಾಗಲಿದೆ ಎಂದು ಸ್ನೇಯ್ಡರ್ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಕೃತಜ್ಞತೆಯನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾದ ಷ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾ ಕಂಪನಿಯ ಉಪಾಧ್ಯಕ್ಷರಾದ ದೇವ್ ದಾಸ್ ಶೆಟ್ಟಿ ಮತ್ತು ಸಿಎಸ್ಆರ್ ವಿಭಾಗದ ಡಿಜಿಎಂ ಪ್ರಶಾಂತ್ ಶೆಟ್ಟಿಯವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಹಾಗು ಕಾಲೇಜಿನ ವತಿಯಿಂದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಕಾಲೇಜಿನ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಅತಿಥಿಗಳೊಂದಿಗೆ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಕಾಲೇಜಿನ ಟೊಯೋಟಾ ಕಾರ್ಯಾಗಾರ, ಫಿಟ್ಟರ್ , ಟರ್ನರ್ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗು ಯಂತ್ರೋಪಕರಣಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಟೂಲ್ ಕಿಟ್ ವಿತರಣೆ :
ಕಾರ್ಯಕ್ರಮದಲ್ಲಿ ಸ್ನೇಯ್ಡರ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ವತಿಯಿಂದ ಸೂಮಾರು 50 ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ಬ್ಯಾಗ್ ವಿತರಿಸಲಾಯಿತು. ವೇದಿಕೆಯಲ್ಲಿ ಸಾಂಕೇತಿಕವಾಗಿ ರೋಹಿತ್, ಪ್ರದೀಪ್,ಕಾರ್ತಿಕ್ ರಾಜ್ , ಧನುಶ್ , ಸೂರಜ್ ಕಿಣಿ, ಚೈತ್ರೇಶ್ ಸೇರಿದಂತೆ 6 ಜನ ವಿದ್ಯಾರ್ಥಿಗಳಿಗೆ ಅತಿಥಿಗಳಾದ ದೇವದಾಸ್ ಶೆಟ್ಟಿ ಹಾಗು ಪ್ರಶಾಂತ್ ಶೆಟ್ಟಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಸಮ್ಮುಖದಲ್ಲಿ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು , ನಿವೃತ್ತ ಪ್ರಾಚಾರ್ಯರು , ಹಳೆ ವಿದ್ಯಾರ್ಥಿ ಸಂಘದವರು ಸೇರಿದಂತೆ ಹಲವಾರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಪ್ರಭಾ ಮತ್ತು ಪೂಜಾ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಪದ್ಮ ಪ್ರಸಾದ್ ಬಿ ನಿರೂಪಿಸಿ, ರಾಮ ಚಂದ್ರ ಶೆಟ್ಟಿ ವಂದಿಸಿದರು.




