ಮಂಗಳೂರು: ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಸಿಮೆಂಟ್ ಶೀಟ್ನಿಂದ ಭೀಕರವಾಗಿ ಹಲ್ಲೆ ನಡೆಸಿ, ಕೊಲೆ ಯತ್ನ ಕೈಗೊಂಡಿದ್ದ ಪ್ರಕರಣದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸರು ಸಿನೆಮಾ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.

ಕೇರಳದ ಕಾಂಞಗಾಡ್ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಲ್ಲಿ ಒರ್ವ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ಉಪ್ಪರಡ್ಕ ನಿವಾಸಿ ಆಟೋ ಚಾಲಕ ಕೆ.ಕೆ.ರಾಜ ಎಂಬುವರ ಪುತ್ರ ಸಚಿನ್ (24) ಮತ್ತೋರ್ವ ಆರೋಪಿ ಪುತ್ತೂರು ತಾಲೂಕಿನ ಮಣ್ಣಗುಂಡಿಯ ಚಂದನ್ (24)ನ್ನು ಬಂಧಿಸಲಾಗಿದೆ.

ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ನಾರಾಯಣಗುರು ಸಮುದಾಯ ಭವನ ರಸ್ತೆಯ ಎದುರು ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕೆಂಪು ಬಣ್ಣದ ಎಲೆಕ್ಟ್ರಿಕಲ್ ಸ್ಕೂಟರ್ ನಲ್ಲಿ ಬಂದ ಇಬ್ಬರು ಯುವಕರಲ್ಲಿ, ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಸಿಮೆಂಟ್ ಶೀಟ್ನ ತುಂಡಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ತಲೆಗೆ ಹೊಡೆದು ಹಲ್ಲೆ
ನಡೆಸಿದ್ದ ಪರಿಣಾಮವಾಗಿ ಪೊಲೀಸ್ ಸಿಬ್ಬಂದಿಯ ತಲೆಗೆ ಗಾಯ ಉಂಟಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಯತ್ನ ನಡೆಸಿರುವ ಬಗ್ಗೆ, ಮಂಗಳೂರು ಉರ್ವ ಪೊಲೀಸ್ ಠಾಣೆ ಅ.ಕ್ರ. 57/ 2026 ಕಲಂ 120(1), 109, 132, 3(5) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.







