ನೆಲಮಂಗಲ : ಸಾಮಾಜಿಕ ಜಾಲತಾಣಗಳ ಪರಿಚಯ ಮತ್ತು ಪ್ರೀತಿ ಎಷ್ಟೊಂದು ಬೇಗ ಹಳಿತಪ್ಪಬಹುದು ಎಂಬುದಕ್ಕೆ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸ್ನಾಪ್ಚಾಟ್ ಆ್ಯಪ್ನಲ್ಲಿ ಪರಿಚಯವಾಗಿ, ಒಂದೂವರೆ ವರ್ಷಗಳ ಕಾಲ ಪ್ರೀತಿಸಿ, ಕೇವಲ ಎರಡು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಈಗ ಎರಡೇ ತಿಂಗಳಲ್ಲಿ ವಿಚ್ಛೇದನದ ಹಂತಕ್ಕೆ ಬಂದು ನಿಂತಿದೆ. ಮದುವೆಯಾದ ಎರಡೇ ತಿಂಗಳಿಗೆ ಪತಿರಾಯ ‘ನೀನು ನನಗೆ ಬೇಡ’ ಎಂದು ಹೆಂಡತಿಯನ್ನು ಕೈಬಿಟ್ಟಿದ್ದು, ಹತಾಶಳಾದ ನೊಂದ ಯುವತಿ ತನಗೆ ನ್ಯಾಯ ಬೇಕು, ಗಂಡನೇ ಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ.

ತಬ್ಬಲಿ ಯುವತಿಗೆ ಕೈಕೊಟ್ಟ ಪತಿರಾಯ
ನೊಂದ ಸಂತ್ರಸ್ತ ಯುವತಿ ನರ್ಸಿಂಗ್ ಮುಗಿಸಿಕೊಂಡಿದ್ದು, ಆಕೆಗೆ ತಂದೆ-ತಾಯಿ ಯಾರೂ ಇಲ್ಲದ ತಬ್ಬಲಿಯಾಗಿದ್ದಳು. ಸುಮಾರು ಒಂದೂವರೆ ವರ್ಷದ ಹಿಂದೆ ಈಕೆಗೆ ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿಯ ನಿವಾಸಿಯಾದ ಚೇತನ್ ಎಂಬಾತನ ಪರಿಚಯ ಸ್ನಾಪ್ಚಾಟ್ನಲ್ಲಿ ಆಗಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಮತ್ತು ಯುವತಿಯ ಪರಿಚಯ ದಿನ ಕಳೆದಂತೆ ಗಾಢ ಪ್ರೀತಿಗೆ ತಿರುಗಿತ್ತು. ಆಕೆಯ ಅನಾಥ ಸ್ಥಿತಿಯನ್ನು ಅರಿತೂ ಚೇತನ್ ಪ್ರೀತಿಯಿಂದ ಎರಡು ತಿಂಗಳ ಹಿಂದೆ ಸಪ್ತಪದಿ ತುಳಿದು ತನ್ನ ಮನೆಗೆ ಕರೆತಂದಿದ್ದ.

ಆದರೆ, ಇವರ ಸಂಸಾರ ಸುಖವಾಗಿ ಸಾಗಿದ್ದು ಕೇವಲ ಕೆಲವೇ ದಿನಗಳು ಮಾತ್ರ. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಕೌಟುಂಬಿಕ ಕಲಹಗಳು ಆರಂಭವಾಗಿದ್ದವು. ‘ನನ್ನ ತಂದೆ-ತಾಯಿಗೆ ನೀನು ಮನೆಯಲ್ಲಿ ಸರಿಯಾಗಿ ಗೌರವ ಕೊಡುತ್ತಿಲ್ಲ’ ಎಂದು ಚೇತನ್ ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದ ಎನ್ನಲಾಗಿದೆ. ದಿನಕಳೆದಂತೆ ಈ ಕೌಟುಂಬಿಕ ಜಗಳ ತಾರಕಕ್ಕೇರಿದ್ದು, ಚೇತನ್ ತನ್ನ ಹೆಂಡತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ‘ನೀನು ನನಗೆ ಬೇಡವೇ ಬೇಡ’ ಎಂದು ದೂರ ತಳ್ಳಿದ್ದಾನೆ.
ತಬ್ಬಲಿಯಾಗಿದ್ದ ತನಗೆ ಈಗ ಗಂಡನೂ ಇಲ್ಲದೆ ಆಸರೆಯೇ ಇಲ್ಲದಂತಾಗಿದೆ ಎಂದು ಕಣ್ಣೀರಿಟ್ಟಿರುವ ಯುವತಿ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಪತಿಯನ್ನು ಕರೆಸಿ ಕೌನ್ಸೆಲಿಂಗ್ ನಡೆಸಲು ಮುಂದಾಗಿದ್ದಾರೆ.







