ಬೆಳಾಲು: ಬೆಳಾಲು ಸಿಎ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಹೊಸ ತಿರುವು ಸಿಕ್ಕಿದೆ. ಹಗರಣದ ಆರೋಪಿ ಪ್ರಶಾಂತ್ ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಾಲು ಸಿಎ ಬ್ಯಾಂಕ್ ಹಗರಣದ ಆರೋಪಿಯಾಗಿರುವ, ಬಂದಾರು ಗ್ರಾಮದ ಬೈದ್ರೊಟ್ಟು ನಿವಾಸಿ ಪ್ರಶಾಂತ್ ಎಂಬವರ ಮೇಲೆ ವಿಘ್ನೇಶ್ ಗೌಡ ಎಂಬಾತ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಗಾಯಗೊಂಡ ಪ್ರಶಾಂತ್ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸರುಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನಲೆ:
ಬೆಳ್ತಂಗಡಿ ತಾಲೂಕಿನ ಬೆಳಾಲು ಸೊಸೈಟಿಗೆ ಬಂದಿದ್ದ ಎ.22 ರಂದು ಬಂದಿದ್ದ ಪ್ರಶಾಂತ್ ತನ್ನ ಕೆಲಸ ಮುಗಿಸಿ ಸೊಸೈಟಿಯಿಂದ ಹೊರಗೆ ಬಂದಾಗ ಸೊಸೈಟಿ ವಠಾರದಲ್ಲಿದ್ದ ತನ್ನ ಪರಿಚಯಸ್ತ ವಿಘ್ನೇಶ್ ಗೌಡ ಎಂಬಾತನು ಪ್ರಶಾಂತ್ ಬಳಿ ಬಂದು “ನನ್ನ ಬಂಗಾರ ಎಲ್ಲಿ” ಎಂದು ಜಗಳ ತೆಗೆದು ಆತನಿಗೆ ಕೈಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಆರೋಪಿ ವಿಘ್ನೇಶ್ ಗೌಡ ಕೈಯಿಂದ ಹಲ್ಲೆ ಮಾಡಿದಾಗ ಪ್ರಶಾಂತ್ ಕೈ ಅಡ್ಡ ಇಟ್ಟಾಗ ಆತನ ಕೈ ಬೆರಳಿಗೆ ಗಾಯವಾಗಿದ್ದ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೇ.15 ರಂದು ಬಿಎನ್ಎಸ್ ೧೧೫(೨), ೩೫೨ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







