ಉಜಿರೆ: ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ಉಜಿರೆಯ ಫೌಂಡೇಶನ್ ಸ್ಟೇಜ್ (ಪ್ರಿ ಕೆಜಿಯಿಂದ 2ನೇ ತರಗತಿ) ಮಕ್ಕಳ ಪೋಷಕರಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಜೂನ್ 4 ರಂದು ಎಸ್.ಡಿ.ಎಮ್ ಪದವಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಮನೋವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕರು ಹಾಗೂ ಆಳ್ವಾಸ್ ಸೆಂಟರ್ ಫಾರ್ ವೆಲ್ನೆಸ್ ಆ್ಯಂಡ್ ಟ್ರೈನಿಂಗ್ ನ ನಿರ್ದೇಶಕರಾದ ಡಾ.ದೀಪಾ ಕೊಟಾರಿ ಇವರು ಪೋಷಕರಿಗೆ ಅಮೂಲ್ಯವಾದ ಮಾರ್ಗದರ್ಶನ ನೀಡಿದರು.




‘ಸೋಶಿಯಲ್, ಇಮೋಶನಲ್ ಆ್ಯಂಡ್ ಅಕಾಡೆಮಿಕ್ ಗ್ರೋತ್’ ಎಂಬ ವಿಷಯದ ಕುರಿತು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು. ಮಕ್ಕಳ ಸಾಮಾಜಿಕ, ಭಾವನಾತ್ಮಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಮಹತ್ವವನ್ನು ವಿವರಿಸಿದರು. ಮಕ್ಕಳಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಉತ್ತಮ ಸಂವಹನ ಕೌಶಲ್ಯ ಮತ್ತು ಕಲಿಕೆಯ ಆಸಕ್ತಿಯನ್ನು ಬೆಳೆಸುವ ಕುರಿತು ಪರಿಣಾಮಕಾರಿ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ಮನಮೋಹನ್ ನಾಯಕ್ ಕೆ.ಜಿ ಅವರು ವಹಿಸಿ, ಮಕ್ಕಳ ಸಮಗ್ರ ಬೆಳವಣಿಗೆಗಾಗಿ ಶಾಲೆ ಹಾಗೂ ಪೋಷಕರ ನಡುವಿನ ಉತ್ತಮ ಸಹಕಾರದ ಅಗತ್ಯವನ್ನು ತಿಳಿಸಿದರು.
ಮಕ್ಕಳ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಅನೇಕ ಉಪಯುಕ್ತ ಮಾಹಿತಿಗಳನ್ನು ಪೋಷಕರು ಪಡೆದುಕೊಂಡರು.
ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಟ್ಟಿ ಅವರು ನಿರೂಪಿಸಿದರು. ಪೋಷಕರು ಮತ್ತು ಶಾಲೆಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.







