ಉಜಿರೆ (ಜೂ.10) : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಉಪನ್ಯಾಸಕರಾಗಿರುವ ಅಮಿತ್ ಕೆ ಜೈನ್ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಪಿ.ಎಚ್.ಡಿ ಪದವಿ ಪ್ರದಾನ ಮಾಡಿದೆ.




ಇವರು ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಪ್ರಾಧ್ಯಾಪಕರಾದ ಪ್ರೋ. ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ “Facial Expression Classification Through Machine Learning Algorithms: Extracting Discernible Patterns for Enhanced Recognition” ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿದ್ದರು.
ಈ ಸಂಶೋಧನೆಯಲ್ಲಿ ಮನುಷ್ಯರ ಮುಖಭಾವಗಳನ್ನು (Facial Expressions) ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಯಂತ್ರ ಕಲಿಕೆ (Machine Learning) ತಂತ್ರಜ್ಞಾನಗಳ ಸಹಾಯದಿಂದ ನಿಖರವಾಗಿ ಗುರುತಿಸುವ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ವ್ಯಕ್ತಿಯ ಸಂತೋಷ, ದುಃಖ, ಕೋಪ, ಆಶ್ಚರ್ಯ, ಭಯ ಹಾಗೂ ಇತರ ಭಾವನೆಗಳನ್ನು ಕಂಪ್ಯೂಟರ್ ವ್ಯವಸ್ಥೆಗಳು ಸ್ವಯಂಚಾಲಿತವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುವ ಹೊಸ ತಂತ್ರಗಳನ್ನು ಈ ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ.
Facial Expression recognition ಭವಿಷ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ಉಪಯುಕ್ತವಾಗಲಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳ ಭಾವನಾತ್ಮಕ ಸ್ಥಿತಿಯನ್ನು ಗುರುತಿಸಲು, ಮಾನಸಿಕ ಆರೋಗ್ಯದ ಮೌಲ್ಯಮಾಪನಕ್ಕೆ, ಆಟಿಸಂ ಅಥವಾ ವಿಶೇಷ ಅಗತ್ಯತೆ ಹೊಂದಿರುವ ಮಕ್ಕಳ ವರ್ತನೆ ಅಧ್ಯಯನಕ್ಕೆ, ಸ್ಮಾರ್ಟ್ ಶಿಕ್ಷಣ ವ್ಯವಸ್ಥೆಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಅಳೆಯಲು, ಭದ್ರತಾ ವ್ಯವಸ್ಥೆಗಳಲ್ಲಿ ಅನುಮಾನಾಸ್ಪದ ವರ್ತನೆಗಳನ್ನು ಪತ್ತೆಹಚ್ಚಲು ಹಾಗೂ ಮಾನವ-ಯಂತ್ರ ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ನೆರವಾಗಲಿದೆ. ಮುಂದಿನ ದಿನಗಳಲ್ಲಿ ರೋಬೋಟಿಕ್ಸ್, ಸ್ವಯಂಚಾಲಿತ ವಾಹನಗಳು, ಡಿಜಿಟಲ್ ಆರೋಗ್ಯ ಸೇವೆಗಳು ಮತ್ತು ಸ್ಮಾರ್ಟ್ ಸಾಧನಗಳ ಅಭಿವೃದ್ಧಿಯಲ್ಲಿಯೂ ಇಂತಹ ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.
ಅಮಿತ್ ಕೆ ಜೈನ್ ಅವರು ಸಂಸೆಯ ಕೀರ್ತಿ ಜೈನ್ ಮತ್ತು ಕಲ್ಪನಾ ಕೆ ಜೈನ್ ದಂಪತಿಗಳ ಸುಪುತ್ರರಾಗಿದ್ದಾರೆ. ಇವರ ಈ ಶೈಕ್ಷಣಿಕ ಸಾಧನೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಪ್ರಾಂಶುಪಾಲ ಡಾ. ಅಶೋಕ್ಕುಮಾರ್, ಅಧ್ಯಾಪಕ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.







