ಮಂಗಳೂರು, (ಜುಲೈ.1): ಕರಾವಳಿಯಲ್ಲಿ ಮುಂದುವರಿದಿರುವ ಭಾರೀ ಮಳೆಗೆ ನಗರದ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗರೋಡಿ ಸಮೀಪದ ಮಾರಿಯಲ್ ಹೌಸ್ನಲ್ಲಿ ಬುಧವಾರ ಮುಂಜಾನೆ ಭೀಕರ ದುರಂತವೊಂದು ಸಂಭವಿಸಿದೆ. ಮುಂಜಾನೆ ಸುಮಾರು 4.45ರಿಂದ 5.00 ಗಂಟೆಯ ನಡುವೆ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ನಾಲ್ಕು ಬಾಡಿಗೆ ಮನೆಗಳು ಜಖಂಗೊಂಡಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮುಂಜಾನೆ ನಿದ್ದೆಯಲ್ಲಿದ್ದಾಗ ಎರಗಿದ ಕಾಂಪೌಂಡ್ ಗೋಡೆ:
ಕಾಂಪೌಂಡ್ ಗೋಡೆಯ ಕೆಳಭಾಗದಲ್ಲಿದ್ದ ನಾಲ್ಕು ಕುಟುಂಬಗಳ ಮನೆಗಳ ಹಿಂಭಾಗದ ಗೋಡೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಇವುಗಳಲ್ಲಿ ಎರಡು ಕುಟುಂಬಗಳು ತೀವ್ರವಾಗಿ ತೊಂದರೆಗೆ ಒಳಗಾಗಿವೆ. ಮುಂಜಾನೆ ಎಲ್ಲರೂ ಗಾಢ ನಿದ್ದೆಯಲ್ಲಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಬಿಹಾರದ ಇಬ್ಬರು ಬಾಲಕಿಯರು, ಉಡುಪಿ ಮೂಲದ ಮಹಿಳೆ ಸಾವು:
ದುರಂತಕ್ಕೊಳಗಾದ ಮೊದಲ ಕುಟುಂಬ ಬಿಹಾರ ರಾಜ್ಯದ ಮೂಲದ ಲಾಲ್ಬಾಬು (37) ಹಾಗೂ ಪತ್ನಿ ಇಂದು (34) ದಂಪತಿಯದ್ದಾಗಿದೆ. ಕಳೆದ ಎಂಟು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ ಇವರಿಗೆ ಅಲ್ಕಾ (14), ಅನುಷ್ಕಾ (11), ಅನಾಮಿಕಾ (7) ಹಾಗೂ ತನು (3) ಎಂಬ ನಾಲ್ವರು ಪುತ್ರಿಯರಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಲಾಲ್ಬಾಬು, ಇಂದು ಹಾಗೂ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಎರಡನೇ ಕುಟುಂಬ ಉಡುಪಿ ಜಿಲ್ಲೆಯ ಮೂಲದ ಬಾಲಕೃಷ್ಣ (40) ಹಾಗೂ ಪತ್ನಿ ಶಾಂತಾ (35) ದಂಪತಿಯದ್ದಾಗಿದೆ. ಕಳೆದ ಎಂಟು ತಿಂಗಳಿನಿಂದಷ್ಟೇ ಇವರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಬಾಲಕೃಷ್ಣ ಅವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಆದರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಶಾಂತಾ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆಸ್ಪತ್ರೆಗೆ ದಾಖಲು, ಮುಂದುವರಿದ ಕಾರ್ಯಾಚರಣೆ:
ಘಟನೆಯಲ್ಲಿ ಗಾಯಗೊಂಡವರು ಮತ್ತು ಸಂತ್ರಸ್ತರನ್ನು ತಕ್ಷಣವೇ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಆಸ್ಪತ್ರೆಯ ಅಧಿಕೃತ ವೈದ್ಯಕೀಯ ವರದಿ ಬಂದ ಬಳಿಕವೇ ಸಾವು-ನೋವಿನ ಬಗ್ಗೆ ಹಾಗೂ ಗಾಯಾಳುಗಳ ಸ್ಥಿತಿಯ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.







