ಗುರುವಾಯನಕೆರೆ: ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವ ಬೆಳ್ತಂಗಡಿಯ ಗುರುವಾಯನಕೆರೆಯ ಎಕ್ಸೆಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಸುಮಂತ್ ಕುಮಾರ್ ಜೈನ್ ಅವರ ಸಾಧನೆಯ ಮುಡಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯ ಗರಿ ಸೇರ್ಪಡೆಯಾಗಿದೆ.

ಕಳೆದ ವರ್ಷವಷ್ಟೇ ವಿಜಯವಾಣಿ ದಿನಪತ್ರಿಕೆಯಿಂದ ‘ವಿಜಯ ರತ್ನ’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸುಮಂತ್ ಕುಮಾರ್ ಜೈನ್ ಅವರಿಗೆ, ಈಗ ಮಂಗಳೂರಿನ ಪ್ರಸಿದ್ಧ ‘ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿ’ಯು 2026ನೇ ಸಾಲಿನ ‘ವಿದ್ಯಾ ಸಿರಿ’ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಜಿಲ್ಲೆಯಾದ್ಯಂತ ಮತ್ತು ಶಿಕ್ಷಣ ವಲಯದಲ್ಲಿ ಭಾರೀ ಸಂತಸ ಮೂಡಿಸಿದೆ.
ಗುರುವಾಯನಕೆರೆಯ ಎಕ್ಸೆಲ್ ಸಂಸ್ಥೆಯ ಆವರಣಕ್ಕೆ ಆಗಮಿಸಿದ ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀನಿವಾಸ್ ಅವರು, ಸುಮಂತ್ ಕುಮಾರ್ ಜೈನ್ ಅವರಿಗೆ ಅಧಿಕೃತವಾಗಿ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಈ ವೇಳೆ ಮಾತನಾಡಿದ ಶ್ರೀನಿವಾಸ್ ಅವರು, ಈ ಬಾರಿ ಇಡೀ ಕರ್ನಾಟಕದಲ್ಲೇ ಕೇವಲ ಇಬ್ಬರು ಸಾಧಕರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಅದರಲ್ಲಿ ಸುಮಂತ್ ಕುಮಾರ್ ಜೈನ್ ಒಬ್ಬರಾಗಿರುವುದು ಅತ್ಯಂತ ವಿಶೇಷ ಮತ್ತು ಹೆಮ್ಮೆಯ ಸಂಗತಿ ಎಂದರು.
ಇನ್ನು ಈ ಅರ್ಥಪೂರ್ಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ರಾಜೇಂದ್ರ ಭಟ್, ಪ್ರಾಚಾರ್ಯರಾದ ಡಾ. ಶ್ರೀ ನವೀನ್ ಕುಮಾರ್ ಮರಿಕೆ, ಡಾ. ಪ್ರಜ್ವಲ್, ಉಪಪ್ರಾಚಾರ್ಯರುಗಳಾದ ಶ್ರೀ ರೋಹಿತ್ ಕುಮಾರ್ ಮತ್ತು ಶ್ರೀ ಹರೀಶ್ ಸೇರಿದಂತೆ ಕೀರ್ತಿನಿಧಿ ಜೈನ್, ಸಂಯೋಜಕರಾದ ನಿಶಾ ಪೂಜಾರಿ, ಶ್ರೀನಿಧಿ ಹಾಗೂ ನಿಲಯ ಮೇಲ್ವಿಚಾರಕರಾದ ಮಲ್ಲೇಶ್ ಜೈನ್ ಉಪಸ್ಥಿತರಿದ್ದರು. ಇವರೊಂದಿಗೆ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿ ಸುಮಂತ್ ಕುಮಾರ್ ಜೈನ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುತ್ತಿರುವ ಸುಮಂತ್ ಕುಮಾರ್ ಜೈನ್ ಅವರಿಗೆ ‘ವಿದ್ಯಾ ಸಿರಿ’ ಪ್ರಶಸ್ತಿ ಲಭಿಸಿರುವುದು ಎಕ್ಸೆಲ್ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.





