ಉಜಿರೆ: ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಶುಭಾಶೀರ್ವಾದಗಳೊಂದಿಗೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು, ಬೆಳ್ತಂಗಡಿ ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಹಾಗೂ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ, ಉಜಿರೆ ಇವುಗಳ ಸಹಯೋಗದೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ *“ನೈತಿಕ ಶಿಕ್ಷಣ ಮತ್ತು ಕಾನೂನು ಅರಿವು”* ಕಾರ್ಯಕ್ರಮವು ಆಗಸ್ಟ್ 13ರಂದು ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಉಜಿರೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ರಾಜೇಶ್ವರಿ ಕಿರಿಯಾಡಿ ಯವರು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿಯಲ್ಲಿರುವ ಆಚಾರ-ವಿಚಾರಗಳು, ಉಡುಗೆ-ತೊಡುಗೆ ಹಾಗೂ ಸಂಸ್ಕಾರಗಳನ್ನು ಗೌರವಿಸಿ, ನಮ್ಮ ಸಂಸ್ಕೃತಿಯನ್ನು ಬೆಳೆಸಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು. ಪ್ರತಿಯೊಂದು ವಲಯದಲ್ಲಿಯೂ ನಡೆಯುವ ಬಾಲಗೋಕುಲ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಅರಿತುಕೊಳ್ಳಬೇಕು ಎಂದರು. ಮನೆಯಲ್ಲಿ ದೇವರ ನಾಮಸ್ಮರಣೆ ಮಾಡುವುದು, ಗುರು-ಹಿರಿಯರಿಗೆ ಗೌರವ ನೀಡುವುದು ಹಾಗೂ ಉತ್ತಮ ನಡತೆಯನ್ನು ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ. ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಅವರು ಕಾನೂನು ಅರಿವಿನ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ ಪೋಕ್ಸೋ ಕಾಯ್ದೆ, ರಸ್ತೆ ಸುರಕ್ಷತೆ, ಅಪಘಾತಗಳ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ಕಾನೂನುಗಳನ್ನು ತಿಳಿದುಕೊಂಡು, ಯಾವುದೇ ರೀತಿಯ ತಪ್ಪು ಚಟುವಟಿಕೆಗಳಿಗೆ ಒಳಗಾಗದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾನೂನು ಅರಿವು ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಉತ್ತಮ ವಿದ್ಯಾರ್ಥಿ ಹಾಗೂ ಜವಾಬ್ದಾರಿಯುತ ನಾಗರಿಕನಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿದ್ಯಾಕಿರಣ್ ಅವರು ಮಾತನಾಡಿ, ಭಜನೆಯಿಂದ ಮನಸ್ಸಿಗೆ ನೆಮ್ಮದಿ, ಶಾಂತಿ, ಏಕಾಗ್ರತೆ ಹಾಗೂ ಭಕ್ತಿಭಾವ ಮೂಡುತ್ತದೆ. ನೈತಿಕ ಮೌಲ್ಯಗಳು ನಮ್ಮ ನಡತೆಯನ್ನು ಉತ್ತಮಗೊಳಿಸುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶ್ರೀ ರವಿರಾಜ್ ಚಾರ್ಮಾಡಿ ಅಧ್ಯಕ್ಷರು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಬೆಳ್ತಂಗಡಿ ತಾಲೂಕು. ಶ್ರೀಮತಿ ಪುಷ್ಪಾವತಿ ಶೆಟ್ಟಿ ಅಧ್ಯಕ್ಷರು ಭಜನಾ ಪರಿಷತ್ತು ಉಜಿರೆ. ಶ್ರೀ ಪ್ರೇಮ್ ಪ್ರಸಾದ್ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಜಿರೆ ಇವರು ಉಪಸ್ಥಿತರಿದ್ದರು.ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿನಿ ಅನುಷಾ ಸ್ವಾಗತಿಸಿ, ಸಾನಿಧ್ಯ ವಂದಿಸಿದರು. ಸನ್ನಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು, ಭಾರತೀಯ ಸಂಸ್ಕೃತಿ, ಕಾನೂನು ಅರಿವು, ಸಾಮಾಜಿಕ ಜವಾಬ್ದಾರಿ ಹಾಗೂ ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವಲ್ಲಿ ಅರ್ಥಪೂರ್ಣವಾಗಿತ್ತು.:::




