ಬೆಳ್ತಂಗಡಿ: ನಿರಂತರ ಪರಿಶ್ರಮ, ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಕೊನೆಗೂ ಸಾರ್ಥಕತೆ ಸಿಕ್ಕಿದೆ! ಸಾಲು ಸಾಲು ಸವಾಲುಗಳು, ಏಳುಬೀಳುಗಳು ಎದುರಾದರೂ ಧೃತಿಗೆಡದೆ ಸೇವೆ ಸಲ್ಲಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಕಾಶಿಪಟ್ಣದ ಮೇಗಿನಬರಿಂಜದ ಶ್ರೀ ಜಿನೇಂದ್ರ ಎಂ. ಅವರಿಗೆ ಕೊನೆಗೂ ಅರ್ಹ ಮುಂಬಡ್ತಿ ದೊರೆತಿದೆ.

ಸರ್ಕಾರವು ಅವರನ್ನು ಜಿಲ್ಲಾ ಅಧಿಕಾರಿ ಗ್ರೇಡ್-1 ಹುದ್ದೆಗೆ ಸ್ಥಾನವನ್ನ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ನಾಗರೀಕ ಸೇವೆಗಳು (ಮುಂಬಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ನಿಯಮಗಳು ೧೯೭೮ ರ ನಿಯಮ 2(1)(ಎ) ರನ್ವಯ ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದೆ.
ಗ್ರೇಡ್-2 ವೃಂದದಲ್ಲಿದ್ದ ಶ್ರೀ ಜಿನೇಂದ್ರ ಎಂ. ಅವರಿಗಿಂತ ಜೇಷ್ಠತೆಯಲ್ಲಿ (Seniority) ಕಿರಿಯರಾದ ಅಧಿಕಾರಿಗಳಿಗೆ ಈ ಹಿಂದೆ ಜಿಲ್ಲಾ ಅಧಿಕಾರಿ ಗ್ರೇಡ್-1 ಹುದ್ದೆಗೆ ಮುಂಬಡ್ತಿ ನೀಡಲಾಗಿತ್ತು. ಆದರೆ, ಈಗ ಜಿನೇಂದ್ರ ಅವರ ಸೇವೆಯನ್ನು ಪರಿಗಣಿಸಿ, ದಿನಾಂಕ 03-05-2025 ರಿಂದ ಜಾರಿಗೆ ಬರುವಂತೆ ಪೂರ್ವಾನ್ವಯವಾಗಿ (Retrospectively) ಜಿಲ್ಲಾ ಅಧಿಕಾರಿ ಗ್ರೂಪ್-ಎ ವೃಂದದ ಉಳಿಕೆ ಮೂಲ ವೃಂದದಲ್ಲಿ ರೂ. 53,700 ರಿಂದ 1,55,200 ವೇತನ ಶ್ರೇಣಿಯ ಜಿಲ್ಲಾ ಅಧಿಕಾರಿ ಗ್ರೇಡ್-1 ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.

ಮುಂಬಡ್ತಿಯ ಜೊತೆಗೆ, ಅವರನ್ನು ಪ್ರಸ್ತುತ ಸೇವೆಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿಯೇ ಮುಂದುವರೆಸಿ ಸರ್ಕಾರ ಆದೇಶಿಸಿದೆ.
ಅವರ ಈ ನಿರಂತರ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆಗೆ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರು ಹಾಗೂ ಹಿತೈಷಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.







