ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಸಿಗರಿಗೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಮಂಗಳೂರಿನಿಂದ ಜಲಪಾತ ನೋಡಲು ಬಂದಿದ್ದ ಯುವತಿ ಮತ್ತು ಆಕೆಯ ಸ್ನೇಹಿತನಿಗೆ ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಒಡ್ಡಿದ ಘಟನೆ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಜುಲೈ 12ರಂದು ಮಂಗಳೂರಿನಿಂದ ಯುವತಿಯೊಬ್ಬಳು ತನ್ನ ಸ್ನೇಹಿತ ಫರ್ಹಾನ್ ಜೊತೆಗೆ ಬೈಕ್ನಲ್ಲಿ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ದಿಡುಪೆ ಜಲಪಾತವನ್ನು ನೋಡಲು ಬಂದಿದ್ದರು. ಅರಣ್ಯ ಇಲಾಖೆಯ ಚೆಕ್ ಪೋಸ್ಟ್ನಲ್ಲಿ ನಿಯಮಾನುಸಾರ ಅನುಮತಿ ಪಡೆದುಕೊಂಡು, ಜಲಪಾತ ವೀಕ್ಷಿಸಿ ಹಿಂತಿರುಗುತ್ತಿದ್ದರು.

ಈ ವೇಳೆ ಸ್ಥಳೀಯ ಯುವಕರ ತಂಡವೊಂದು ಯುವತಿಯನ್ನು ತಡೆದು ನಿಲ್ಲಿಸಿದೆ. ‘ನೀನು ಮುಸ್ಲಿಂ ಯುವಕನ ಜೊತೆಗೆ ಏಕೆ ಬಂದಿದ್ದೀಯಾ? ನಿನಗೆ ಹಿಂದೂಗಳು ಆಗುವುದಿಲ್ಲವೇ?’ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ‘ನಿನ್ನೊಂದಿಗೆ ಬಂದಿದ್ದ ಯುವಕನನ್ನು ಇಲ್ಲಿಗೆ ಕರೆಸು, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ನೊಂದ ಯುವತಿಯ ದೂರಿನಂತೆ ಬೆಳ್ತಂಗಡಿ ತಾಲೂಕಿನ ದಿಡುಪೆ ನಿವಾಸಿಗಳಾದ ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್, ದೀಕ್ಷಿತ್ ಹಾಗೂ ಇತರರ ವಿರುದ್ಧ ಭಾರತೀಯ ದಂಡ ಸಂಹಿತೆ 126(2), 352, 351(2) ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





