ಬಂಟ್ವಾಳ : ಪ್ರೀತಿಸಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಬಸ್ಗಾಗಿ ಕಾಯುತ್ತಿದ್ದ ಯುವತಿಯನ್ನು ಸಾರ್ವಜನಿಕರ ಮುಂದೆಯೇ ಬರ್ಬರವಾಗಿ ಕೊಚ್ಚಿ ಕೊಂದಿದ್ದ ಪಾಪಿ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ!”
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್ನಲ್ಲಿ ಗುರುವಾರ ಸಂಜೆ ನಡೆದಿದ್ದ ಲಾವಣ್ಯ ಗೌಡ ಭೀಕರ ಕೊಲೆ ಪ್ರಕರಣದ ಆರೋಪಿ ಚೇತನ್ನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏಕಪಕ್ಷೀಯ ಪ್ರೀತಿಯ ಉನ್ಮಾದದಲ್ಲಿ ಯುವತಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಈ ನರಾಧಮನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಗುರುವಾರ ಸಂಜೆ ಸುಮಾರು 6 ಗಂಟೆಯ ಸಮಯ. ಬಿಸಿ ರೋಡ್ನ ಕೆಎಸ್ಆರ್ಟಿಸಿ ನೂತನ ಬಸ್ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರ ದಟ್ಟಣೆ ಇತ್ತು. ಕಕ್ಕೆಪದವು ನಿವಾಸಿಯಾದ 21 ವರ್ಷದ ಲಾವಣ್ಯ ಗೌಡ ಎಂಬ ಯುವತಿ ಊರಿಗೆ ಹೋಗಲು ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಚೇತನ್, ಲಾವಣ್ಯ ಮೇಲೆ ಹರಿತವಾದ ಆಯುಧದಿಂದ ಏಕಾಏಕಿ ಭೀಕರ ದಾಳಿ ನಡೆಸಿ ಪರಾರಿಯಾಗಿದ್ದ.
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಯುವತಿಯನ್ನು ತಕ್ಷಣವೇ ಸ್ಥಳೀಯರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಲಾವಣ್ಯ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. 21 ವರ್ಷದ ಚಿಗುರು ಪ್ರಾಯದ ಯುವತಿಯ ಪ್ರಾಣಪಕ್ಷಿ ಹಾರಿಹೋಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಂತಕ ಚೇತನ್, ಮೃತ ಲಾವಣ್ಯಳ ದೂರದ ಸಂಬಂಧಿಯಾಗಿದ್ದ ಎಂದು ತಿಳಿದುಬಂದಿದೆ. ಈತ ಲಾವಣ್ಯಳನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಲಾವಣ್ಯ ಆತನ ಪ್ರೀತಿಯನ್ನು ಒಪ್ಪಿರಲಿಲ್ಲ. ಇದೇ ದ್ವೇಷ ಮನಸ್ಸಿನಲ್ಲಿಟ್ಟುಕೊಂಡಿದ್ದ ಈ ಸೈಕೋ ಪ್ರೇಮಿ, ಬಸ್ ನಿಲ್ದಾಣದಲ್ಲೇ ಆಕೆಯ ಮುಗಿಸಲು ಸ್ಕೆಚ್ ಹಾಕಿ ಯಶಸ್ವಿಯಾಗಿದ್ದ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತೀವ್ರ ಹುಡುಕಾಟದ ನಂತರ ಆರೋಪಿ ಚೇತನ್ ಪತ್ತೆಯಾಗಿದ್ದಾನೆ. ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿಯನ್ನು ಬಲಿಪಡೆದ ಈ ಹಂತಕನಿಗೆ ಕಠಿಣ ಶಿಕ್ಷೆಯಾಗಲಿ ಅನ್ನೋದೇ ಸಾರ್ವಜನಿಕರ ಆಕ್ರೋಶವಾಗಿದೆ.




