ಪಡಂಗಡಿ: ಬೆಳ್ತಂಗಡಿ ತಾಲೂಕಿನ ಸಾರ್ವಜನಿಕರಿಗೆ ಮತ್ತೆ ಎದುರಾಗಿದ್ದ ರಸ್ತೆ ಸಂಚಾರದ ಸಮಸ್ಯೆ ಕೊನೆಗೂ ಬಗೆಹರಿದಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಗುರುವಾಯನಕೆರೆ–ವೇಣೂರು ಮುಖ್ಯರಸ್ತೆಯ ಪಡಂಗಡಿ ಭಾಗ ಸಂಪೂರ್ಣ ಹದಗೆಟ್ಟು ಹೋಗಿತ್ತು.

ಇದರಿಂದಾಗಿ ಪ್ರತಿದಿನ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಪರದಾಟ ನಡೆಸುವಂತಾಗಿತ್ತು. ಈ ಕುರಿತು ಶಾಸಕ ಹರೀಶ್ ಪೂಂಜ ಅವರು ತಕ್ಷಣವೇ ಸ್ಪಂದಿಸಿದ್ದು, ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈ ಕುರಿತ ಒಂದು ಸಮಗ್ರ ವರದಿ…

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಸಂಪರ್ಕ ರಸ್ತೆಯಾದ ಗುರುವಾಯನಕೆರೆ–ವೇಣೂರು ಮುಖ್ಯರಸ್ತೆಯ ಪಡಂಗಡಿ ಭಾಗವು ಇತ್ತೀಚಿನ ಪ್ರಚಂಡ ಮಳೆಗೆ ಸಂಪೂರ್ಣವಾಗಿ ಗುಂಡಿಬಿದ್ದು, ಅಸಂಖ್ಯಾತ ಸವಾರರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದರು.

ಈ ಸಮಸ್ಯೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಶಾಸಕ ಶ್ರೀ ಹರೀಶ್ ಪೂಂಜ ಅವರ ಮುತುವರ್ಜಿಯಿಂದ ತಕ್ಷಣ ಸ್ಥಳ ಪರಿಶೀಲನೆ ನಡೆಸಲಾಯಿತು. ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ತಕ್ಷಣವೇ ತುರ್ತು ದುರಸ್ತಿ ಕಾರ್ಯಕ್ಕೆ ನಿರ್ದೇಶನ ನೀಡಲಾಯಿತು.

ಸ್ಥಳದಲ್ಲಿ ಸದ್ಯ ತಾತ್ಕಾಲಿಕ ಉಪಶಮನವಾಗಿ ವೆಟ್ ಮಿಕ್ಸ್ ಹಾಕಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗಿದ್ದು, ಸುಗಮ ವಾಹನ ಸಂಚಾರಕ್ಕೆ ಹಾದಿ ಸುಗಮಗೊಳಿಸಲಾಗಿದೆ. ಇದರಿಂದಾಗಿ ನಿತ್ಯ ಪ್ರಯಾಣಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ಪ್ರಸ್ತುತ ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸಾರ್ವಜನಿಕರ ದೀರ್ಘಕಾಲೀನ ಅನುಕೂಲಕ್ಕಾಗಿ ಶೀಘ್ರದಲ್ಲೇ ಶಾಶ್ವತ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.







