ಉಪ್ಪಿನಂಗಡಿ: ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ.

ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರವನ್ನು ಆರೋಪಿ ಉಪ್ಪಿನಂಗಡಿಯಲ್ಲಿ ಖರೀದಿಸಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ, ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆತಂದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

ಕಳೆದ ಜುಲೈ 16 ರಂದು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಚೇತನ್ನನ್ನು ಕರೆತಂದ ಪೊಲೀಸರು ಉಪ್ಪಿನಂಗಡಿಯಲ್ಲಿ ಬುಧವಾರ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ತನಿಖಾಧಿಕಾರಿಗಳು ಆರೋಪಿಯ ಮುಖಕ್ಕೆ ಕಪ್ಪು ಬಟ್ಟೆ ಮರೆಮಾಚಿ ಕರೆತಂದಿದ್ದು, ಸ್ಥಳದಲ್ಲಿದ್ದ ಕೃಷಿ ಸಲಕರಣೆಗಳ ಮಾರಾಟ ಮಳಿಗೆಯಲ್ಲಿ ಸುದೀರ್ಘ ಪರಿಶೀಲನೆ ನಡೆಸಿದರು.

ಲಭ್ಯವಿರುವ ಮಾಹಿತಿಯ ಪ್ರಕಾರ, ಆರೋಪಿ ಚೇತನ್ ತನ್ನ ಏಕಮುಖ ಪ್ರೀತಿಯನ್ನು ನಿರಾಕರಿಸಿದ ಲಾವಣ್ಯಳನ್ನು ಕೊಲೆ ಮಾಡಲು ಪೂರ್ವಯೋಜನೆ ರೂಪಿಸಿದ್ದ. ಇದಕ್ಕಾಗಿ ಜುಲೈ 15 ರಂದೇ ಉಪ್ಪಿನಂಗಡಿಗೆ ಆಗಮಿಸಿದ್ದ ಈತ, ಅಲ್ಲಿದ್ದ ಕೃಷಿ ಸಲಕರಣೆಗಳ ಮಳಿಗೆಗೆ ಭೇಟಿ ನೀಡಿದ್ದ. ಆರಂಭದಲ್ಲಿ ಕೃಷಿ ಬಳಕೆಯ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಬೆಲೆ ವಿಚಾರಿಸಿದ್ದ. ಬಳಿಕ ಬೇರೆಡೆ ವಿಚಾರಿಸಲು ಹೋಗಿ, ಮತ್ತೆ ಅದೇ ಮಳಿಗೆಗೆ ಮರಳಿ ಬಂದು ಕತ್ತಿಯನ್ನು ಖರೀದಿಸಿದ್ದ ಎಂಬುದು ತಿಳಿದುಬಂದಿದೆ.

ಅಂಗಡಿಯ ಸಿಬ್ಬಂದಿ ಕತ್ತಿಯನ್ನು ಕಾಗದದಿಂದ ಸುತ್ತಿ ಪ್ಯಾಕ್ ಮಾಡಿಕೊಟ್ಟಿದ್ದರು. ಅದನ್ನು ಕೆಲಕಾಲ ಮಳಿಗೆಯಲ್ಲೇ ಇಟ್ಟು ಹೊರಹೋಗಿದ್ದ ಆರೋಪಿ, ನಂತರ ಮರಳಿ ಬಂದು ಅದನ್ನು ಪಡೆದುಕೊಂಡು ಹೋಗಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಹಜರು ಪ್ರಕ್ರಿಯೆ ವೇಳೆ ಕೃಷಿ ಸಲಕರಣೆ ಮಳಿಗೆಯ ಸಿಬ್ಬಂದಿ ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮಹಜರು ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಕೈಗೆತ್ತಿಕೊಂಡಿದ್ದಾರೆ.







