ಮಂಗಳೂರು: ಬಿಸಿ ರೋಡ್ನಲ್ಲಿ ನಡೆದಿದ್ದ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ಚಿಕಿತ್ಸೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರೋಪಿ ಚೇತನ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದು, ಬಂಟ್ವಾಳ ನಗರ ಪೊಲೀಸರು ಆತನನ್ನು ಬಂಧಿಸಿ ಅಧಿಕೃತ ಕಸ್ಟಡಿಗೆ ಪಡೆದಿದ್ದಾರೆ.

ಇಲಿ ಪಾಷಾಣ ಸೇವಿಸಿದ್ದ ಆರೋಪಿ:
ಕೃತ್ಯ ನಡೆದ ಬಳಿಕ ಆರೋಪಿ ಚೇತನ್ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಅನುಮಾನದಿಂದ ಆತನನ್ನು ತಕ್ಷಣವೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಐಸಿಯುಗೆ (ICU) ಸೇರಿಸಲಾಗಿತ್ತು. ಸುಮಾರು 10 ದಿನಗಳ ಸುದೀರ್ಘ ಚಿಕಿತ್ಸೆಯ ನಂತರ ಆರೋಗ್ಯ ಚೇತರಿಸಿಕೊಂಡಿದ್ದರಿಂದ ವೈದ್ಯರು ಬಿಡುಗಡೆ ಮಾಡಿದ್ದಾರೆ.



4 ದಿನಗಳ ಪೊಲೀಸ್ ಕಸ್ಟಡಿ:
ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ತನಿಖೆಯ ಮಹತ್ವ ಪರಿಗಣಿಸಿದ ಕೋರ್ಟ್, ಆರೋಪಿಯನ್ನು 4 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಸ್ಥಳ ಮಹಜರು ಪೂರ್ಣ:
ಕಸ್ಟಡಿ ಪಡೆದ ಬೆನ್ನಲ್ಲೇ ತನಿಖಾಧಿಕಾರಿಗಳು ಕೃತ್ಯ ನಡೆದ ಬಿಸಿ ರೋಡ್ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಿದ್ದಾರೆ. ಕೃತ್ಯ ನಡೆದ ಸನ್ನಿವೇಶ, ಬಳಸಿದ ವಸ್ತುಗಳು ಹಾಗೂ ಸಾಕ್ಷಾಧಾರಗಳ ಸಂಗ್ರಹಣೆ ಪ್ರಕ್ರಿಯೆ ಭರದಿಂದ ಸಾಗಿದ್ದು, ವಿಚಾರಣೆ ವೇಳೆ ಕೊಲೆಯ ಸಂಪೂರ್ಣ ನೆರಳು ಹೊರಬರುವ ಸಾಧ್ಯತೆಯಿದೆ.






