ಬೆಂಗಳೂರು: ಬೆಂಗಳೂರಿನಲ್ಲಿ ಕರುಳನ್ನೇ ಹಿಂಡುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಜನ್ಮ ನೀಡಿದ ತಂದೆಯೇ ಸಾಕಿ ಬೆಳೆಸಿದ ಮಗಳ ಮೇಲೆ ಕಾಲೇಜಿನ ಒಳಗೇ ನುಗ್ಗಿ ಮಾರಣಾಂತಿಕ ಚಾಕು ದಾಳಿ ನಡೆಸಿದ್ದಾನೆ.

ಈ ಘೋರ ಕೃತ್ಯ ನಡೆದಿದ್ದು ರಾಜಾನುಕುಂಟೆಯ ಖಾಸಗಿ ಕಾಲೇಜಿನಲ್ಲಿ. ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ದುರ್ಗ ಎಂಬ ಯುವತಿಯ ಮೇಲೆ ಆಕೆಯ ಹೆತ್ತ ತಂದೆ ನಾಗೇಂದ್ರ ಎಂಬಾತನೇ ದಾಳಿ ಮಾಡಿದ್ದಾನೆ.


ಜುಲೈ 25ರ ಮಧ್ಯಾಹ್ನ ಸುಮಾರು 3 ಗಂಟೆಯ ಸಮಯ. ಮಗಳನ್ನು ನೋಡಬೇಕು ಎಂದು ಕಾಲೇಜಿಗೆ ಬಂದ ತಂದೆ ನಾಗೇಂದ್ರ, ನೇರವಾಗಿ ಪ್ರಿನ್ಸಿಪಾಲ್ ಕ್ಯಾಬಿನ್ಗೆ ತೆರಳಿದ್ದಾನೆ. ಅಲ್ಲಿ ಮಾತುಕತೆ ನಡೆಸುತ್ತಿದ್ದಂತೆಯೇ ಏಕಾಏಕಿ ರೊಚ್ಚಿಗೆದ್ದು, ತನ್ನ ಬಳಿಯಿದ್ದ ಚಾಕುವಿನಿಂದ ಮಗಳ ಹೊಟ್ಟೆ, ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಸವರಸವರನೆ ಇರಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಕ್ಷ್ಮಿ ದುರ್ಗಾ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿ ನಡೆಸಿ ಪರಾರಿಯಾಗಿರುವ ಆರೋಪಿ ತಂದೆ ನಾಗೇಂದ್ರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತಂದೆಯೇ ಮಗಳ ಮೇಲೆ ಇಷ್ಟೊಂದು ದ್ವೇಷ ಸಾಧಿಸಿ ದಾಳಿ ಮಾಡಲು ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.







