ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಾದ್ಯಂತ ವರುಣದೇವ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ! ಇಂದು ಬೆಳಗಿನಿಂದಲೇ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ಪ್ರಮುಖ ನದಿಗಳು ಮೈದುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಬೆಳ್ತಂಗಡಿಯ ಸೋಮವತಿ ನದಿಯಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಪರಿಣಾಮ, ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ಮುಖ್ಯ ರಸ್ತೆಗೆ ನದಿ ನೀರು ನುಗ್ಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮತ್ತೊಂದೆಡೆ ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳಲ್ಲೂ ಜಲಮಟ್ಟ ಉಗ್ರರೂಪ ತಾಳಿದೆ. ತಾಲೂಕಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳು ಹಾಗೂ ಕೃಷಿ ಭೂಮಿ ಜಲಾವೃತಗೊಳ್ಳುವ ಭೀತಿ ಎದುರಾಗಿದೆ.






