ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆಯೇ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಕುಂದಾಪುರದ ಚರ್ಚ್ ರಸ್ತೆಯಲ್ಲಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಮೃತರನ್ನು 45 ವರ್ಷದ ಐವನ್ ರಿಚರ್ಡ್ ಮಸ್ಕರೇನಸ್ ಎಂದು ಗುರುತಿಸಲಾಗಿದೆ. ಮುಂಜಾನೆ ಸುಮಾರು 3:30 ರ ಸುಮಾರಿಗೆ ಈ ಭೀಕರ ದಾಳಿ ನಡೆದಿದ್ದು, ಇಡೀ ಕುಂದಾಪುರ ನಗರವೇ ಬೆಚ್ಚಿಬಿದ್ದಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಉದ್ಯಮಿಯಾಗಿದ್ದ ಐವನ್ ರಿಚರ್ಡ್ ಅವರು ತಮ್ಮ ಮೊದಲ ಪತ್ನಿಯಿಂದ ದೂರವಾಗಿ ಬಾರ್ಕೂರು ಮೂಲದ ಮಹಿಳೆಯೊಂದಿಗೆ ವಾಸಿಸುತ್ತಿದ್ದರು.

ಇಂದು ಮುಂಜಾನೆ ಸುಮಾರು 3:30 ರ ವೇಳೆಗೆ, ಐವನ್ ಅವರು ಆ ಮಹಿಳೆಯೊಂದಿಗೆ ಕಾರಿನಲ್ಲಿ ಕುಂದಾಪುರದ ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರು ಬಂದಿಳಿದಿದ್ದಾರೆ. ಈ ಸಂದರ್ಭದಲ್ಲಿ ಕಾದು ಕುಳಿತಿದ್ದ ಅಪರಿಚಿತ ವ್ಯಕ್ತಿಯೊಬ್ಬ ದಿಢೀರನೆ ಪಿಸ್ತೂಲ್ನಿಂದ ಐವನ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
ಗುಂಡೇಟಿನಿಂದ ತೀವ್ರ ರಕ್ತಸ್ರಾವಗೊಂಡ ಐವನ್ ರಿಚರ್ಡ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ದಾಳಿ ನಡೆಸಿದ ತಕ್ಷಣ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಐವನ್ ಜೊತೆಯಲ್ಲಿದ್ದ ಮಹಿಳೆ ಆರೋಪಿಯನ್ನು ಗುರುತಿಸಿದ್ದು, ಆಕೆಯ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ನಗರ ಪೊಲೀಸರು ಹಾಗೂ ಸೊಕೊ ತಂಡ ಭೇಟಿ ನೀಡಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.

ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ದ್ವೇಷವೇ ಅಥವಾ ಹಳೆಯ ಉದ್ಯಮದ ಗಲಾಟೆಯೇ ಎಂಬ ಕೋನದಲ್ಲಿ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಹಂತಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಳ್ಳಂಬೆಳಗ್ಗೆ ಚರ್ಚ್ ರಸ್ತೆಯಲ್ಲೇ ನಡೆದ ಈ ಸರಣಿ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಕೊಲೆಯ ಹಿಂದಿರುವ ಅಸಲಿ ರೂವಾರಿ ಯಾರು? ಕೊಲೆಗೆ ಪ್ರಮುಖ ಕಾರಣವೇನು? ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.





