ಬೆಳ್ತಂಗಡಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಮಗುವನ್ನು ಆಕೆಯ ಮನೆಯವರು ಕರೆದುಕೊಂಡು ಹೋದ ಬೇಸರದಿಂದ ಯುವಕನೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ಮೂಡಬಿದ್ರೆ ಸಮೀಪದ ಗಂಟಲ್ಕಟ್ಟೆಯಲ್ಲಿ ನಡೆದಿದೆ.

ಮಿತ್ತಬಾಗಿಲು ಗ್ರಾಮದ ಕಾಜೂರು ನಿವಾಸಿ ಅಬೂಸ್ವಾಲಿಹ್ ಮುಸ್ಲಿಯಾರ್ ಅವರ ಪುತ್ರ ಅನ್ವರ್ ಆತ್ಮಹತ್ಯೆಗೆ ಶರಣಾದ ದುರದೃಷ್ಟಕರ ಯುವಕ. ಇವರು ಗಂಟಲ್ಕಟ್ಟೆಯಲ್ಲಿ ತಾವು ವಾಸವಿದ್ದ ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಜೀವ ತೊರೆದಿದ್ದಾರೆ.
📱 ಪ್ರಾಣ ತೆಗೆಯುವ ಮುನ್ನ ಅಕ್ಕನಿಗೆ ಕಳುಹಿಸಿದ ಕೊನೆಯ ವಾಯ್ಸ್ ನೋಟ್:
ಆತ್ಮಹತ್ಯೆಗೂ ಮುನ್ನ ಅನ್ವರ್ ತನ್ನ ಒಡಹುಟ್ಟಿದ ಅಕ್ಕನಿಗೆ ವಾಟ್ಸಪ್ ವಾಯ್ಸ್ ಮೆಸೇಜ್ ಕಳುಹಿಸಿದ್ದು, ಅದರಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ:
“ನಾನು ಇಷ್ಟು ದಿನ ನನ್ನ ಮಗುವಿನ ಕರೆಗಾಗಿ ಕಾದೆ. ಆದರೆ ಅವರು ಮಗುವನ್ನು ಕಳಿಸುವುದಿಲ್ಲ. ನನ್ನ ಮಗುವಿನ ಮೇಲೆ ಆಣೆ ಮಾಡಿ, ತಾಯಿಯ ಆಣೆ ಮಾಡಿ ಹೇಳುತ್ತಿದ್ದೇನೆ… ನಾನು ಹಗ್ಗ ತೆಗೆಯಲು ಹೊರಡುತ್ತಿದ್ದೇನೆ. ಅಕ್ಕಾ… ನೀನು ಅಮ್ಮನನ್ನು ನೋಡಿಕೋ, ಜಾಗ್ರತೆ ಮಾಡಿಕೋ.”
ಮತ್ತೆರಡು ವಾಯ್ಸ್ ಮೆಸೇಜ್ಗಳಲ್ಲಿ ಅನ್ವರ್ ತನ್ನ ಮಗುವಿಗಾಗಿ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರಿಟ್ಟಿರುವುದು ಪ್ರತಿಯೊಬ್ಬರ ಕರುಳು ಹಿಂಡುವಂತಿದೆ.

⚠️ “ಆ 6 ಮಂದಿಯೇ ನನ್ನ ಸಾವಿಗೆ ಕಾರಣ” – ಆರೋಪಿಗಳ ಹೆಸರು ಬಹಿರಂಗ
ತನ್ನ ಈ ಹತಾಶ ಸ್ಥಿತಿಗೆ ಹಾಗೂ ಮಗುವನ್ನು ತನ್ನಿಂದ ದೂರ ಮಾಡಿದ್ದಕ್ಕೆ ಹೆಂಡತಿಯ ಕಡೆಯ ಆರು ಮಂದಿ ಕಾರಣ ಎಂದು ಅನ್ವರ್ ವಾಯ್ಸ್ ಮೆಸೇಜ್ನಲ್ಲಿ ಸ್ಪಷ್ಟವಾಗಿ ಆರೋಪಿಸಿದ್ದಾರೆ.

ಅನ್ವರ್ ತಮ್ಮ ಧ್ವನಿ ಸಂದೇಶದಲ್ಲಿ ಹೇಳಿರುವುದು:
“ನನ್ನ ಹೆಂಡತಿಯ ಅಪ್ಪ, ಅಮ್ಮ, ತಮ್ಮ, ಅಕ್ಕ ಮತ್ತು ಅವಳ ಅಕ್ಕನ ಗಂಡನನ್ನು ಅರೆಸ್ಟ್ ಮಾಡಬೇಕು. ನನ್ನ ಸಾವಿಗೆ ಅವರೇ ಕಾರಣ, ನನ್ನ ಮಗುವನ್ನು ನನ್ನಿಂದ ದೂರ ಮಾಡಿದ್ದು ಆ ನಾಲ್ಕು ಜನ ಸೇರಿ. ಈ ಆರು ಜನರ ಮೇಲೆ ಕೇಸ್ ಆಗಲೇಬೇಕು. ಉಸ್ಮಾನ್, ಬೀಫಾತಿಮಾ, ಸಫ್ರಾನ್, ಸಿರಾಜ್, ಶಬಾನಾ, ಅಶ್ರಫ್, ಸಫ್ವಾನ್ – ಇವರಲ್ಲಿ ಉಸ್ಮಾನ್ ಹಾಗೂ ಬೀಫಾತಿಮಾ ರೆಂಜಾಳದವರಾದರೆ, ಶಬಾನಾ ಮತ್ತು ಅಶ್ರಫ್ ಮಂಚಕಲ್ ಶಿರ್ವದ ನಿವಾಸಿಗಳು.”

ಪೋಲೀಸ್ ತನಿಖೆ ಆರಂಭ | ಕಾಜೂರಿನಲ್ಲಿ ಅಂತ್ಯಸಂಸ್ಕಾರ
ಘಟನೆಗೆ ಸಂಬಂಧಿಸಿದಂತೆ ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಮಿತ್ತಬಾಗಿಲಿಗೆ ತರಲಾಗಿದ್ದು, ಕಾಜೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.






