ಬೆಳ್ತಂಗಡಿ : ದುಬೈಗೆ ಹೊರಟು ಉತ್ತಮ ಭವಿಷ್ಯ ಕಂಡುಕೊಳ್ಳಬೇಕಿದ್ದ ಯುವಕನೊಬ್ಬ, ರಾತ್ರೋರಾತ್ರಿ ಮಾಡಿದ ಒಂದು ತಪ್ಪಿನಿಂದಾಗಿ ಈಗ ಕಂಬಿ ಎಣಿಸುವಂತಾಗಿದೆ! ಬೆಳ್ತಂಗಡಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕೋಟಿ ಮೌಲ್ಯಕ್ಕೂ ಅಧಿಕದ ಅಕ್ರಮ ಮಾದಕವಸ್ತು ಜಾಲ ಬಯಲಾಗಿದೆ. ದುಬೈ ಪ್ರಯಾಣಕ್ಕೆ ಸಿದ್ಧವಾಗಿದ್ದ ಯುವಕ ಗಾಂಜಾ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದು, ನೇರವಾಗಿ ಜೈಲುಪಾಲಾಗಿದ್ದಾನೆ. ಈ ಆಘಾತಕಾರಿ ಪ್ರಕರಣದ ಪೂರ್ಣ ವಿವರ ಇಲ್ಲಿದೆ…!

ಜುಲೈ 29ರ ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಆನಂದ್ ಎಂ ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಖಾಸಗಿ ಕಟ್ಟಡವೊಂದರ ಮುಂಭಾಗದಲ್ಲಿ ಆಟೋ ರಿಕ್ಷಾ (KA-18-A-7203) ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಯುವಕನೊಬ್ಬ ಪೊಲೀಸ್ ಜೀಪ್ ಕಾಣುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ್ದಾನೆ.
ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಕುವೆಟ್ಟು ಸುತ್ ಕೆರೆ ನಿವಾಸಿ ತ್ವಲಹ್ ಅಲಿಯಾಸ್ ಅನ್ಸರ್ (21) ಎಂದು ತಿಳಿದುಬಂದಿದೆ.
ಪೊಲೀಸರ ಸತತ ವಿಚಾರಣೆ ವೇಳೆ ಆರೋಪಿ ಮತ್ತೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾನೆ. ಆಲಾದಿಕೊಟ್ಟಿಗೆ ನಿವಾಸಿ ಹಮ್ಮತ್ ಕರಾರ್ (31) ಎಂಬಾತನಿಗೆ 20,000 ರೂಪಾಯಿ ಮುಂಗಡ ನೀಡಿ ಗಾಂಜಾ ಖರೀದಿಸಿ, ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.
ಹಮ್ಮತ್ ಕರಾರ್ ತನ್ನ ಕಾರಿನಲ್ಲಿ (KA-21-MA-4990) ಬಂದು 500 ಗ್ರಾಂ ಗಾಂಜಾ ನೀಡಿದ್ದ. ಆದರೆ ಪೊಲೀಸರು ಬರುವುದನ್ನು ಕಂಡು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ.
ಪೊಲೀಸರು ಹಮ್ಮತ್ ಕರಾರ್ ಬಿಟ್ಟುಹೋಗಿದ್ದ ಕಾರನ್ನು ತಪಾಸಣೆ ನಡೆಸಿದಾಗ 76 ಗ್ರಾಂ MDMA (ಅಂದಾಜು ಮೌಲ್ಯ: ₹7,60,000) ಪತ್ತೆಯಾಗಿದೆ.ಆರೋಪಿ ತ್ವಲಹ್ ಬಳಿ 20 ಗ್ರಾಂ ಗಾಂಜಾ (ಮೌಲ್ಯ ₹1,498), ₹30,000 ಮೌಲ್ಯದ ಮೊಬೈಲ್ ಹಾಗೂ ಇತರ ವಸ್ತುಗಳು ಸಿಕ್ಕಿವೆ.ಪೊಲೀಸರು ಕಾರು, ಆಟೋ ರಿಕ್ಷಾ, ಮೊಬೈಲ್ ಫೋನ್ ಹಾಗೂ ಮಾದಕ ವಸ್ತುಗಳನ್ನು ಸೇರಿ ಒಟ್ಟು ₹15,41,698 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(C), 20(b) (ii)(A) ಹಾಗೂ 27Aರ ಅಡಿಯಲ್ಲಿ ಹಮ್ಮತ್ ಕರಾರ್ (31) ಮತ್ತು ತ್ವಲಹ್ @ ಅನ್ಸರ್@ ಅನ್ಸಾರ್(21) ವಿರುದ್ದ ಜು.29 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ತ್ವಲಹ್ @ ಅನ್ವರ್@ ಅನ್ಸಾರ್(21) ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಮಂಗಳೂರು ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಜು.30 ರಂದು ಸಂಜೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದುಬೈನಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕಿದ್ದ ಯುವಕ, ಸುಲಭವಾಗಿ ಹಣ ಗಳಿಸುವ ಆಸೆಗೆ ಬಿದ್ದು ಗಾಂಜಾ ಮತ್ತು MDMA ದಂಧೆಗೆ ಕೈಹಾಕಿ ಜುಲೈ 30ರಂದು ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾನೆ. ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ ಹಾಗೂ ವೃತ್ತ ನಿರೀಕ್ಷಕ ರವಿ ಬಿ.ಎಸ್ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ಆನಂದ್ ಎಂ ಹಾಗೂ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.





