ಕಡಬ: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಅಧಿಕಾರಿಗಳು ಸಮನ್ವಯತೆ ಹಾಗೂ ಸಂಘಟಿವಾಗಿ ಕಾರ್ಯ ನಿರ್ವಹಿಸಬೇಕು, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯಾರೂ ಜವಾಬ್ದಾರಿಯಿಂದ ಜಾರಿಕೊಳ್ಳಬಾರದು , ಒಬ್ಬರು ಇನ್ನೊಬ್ಬರ ಮೇಲೆ ಹೊಣೆಗಾರಿಕೆಯನ್ನು ಹೊರಿಸಿ ಸಂತ್ರಸ್ತರಿಗೆ ಅನ್ಯಾಯ ಮಾಡಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿದರು.

ಅವರು ಗುರುವಾರ ಸಂಜೆ ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಬಾರಿ ಕಡಬ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ, ಪ್ರಕೃತಿ ವಿಕೋಪದಲ್ಲಿ ಎಷ್ಟು ಮನೆಗಳಿಗೆ ಹಾನಿಯಾಗಿದೆ, ಪ್ರಾಣ ಹಾನಿಯಗಿದೆ ಎಂದು ಸಚಿವರು ಪ್ರಶ್ನಿಸಿದಾಗ ಈ ಬಾರಿ ವಾಡಿಕೆಗಿಂದ ಶೇ ೩೦ ರಷ್ಟು ಮಳೆ ಕಡಿಮೆಯಾಗಿದೆ, ಗಾಳಿ ಮಳೆಗೆ ಎರಡು ಮನೆಗಳು ಸಂಪೂರ್ಣ ನಾಶವಾದರೆ, ೬೨ ಮನೆಗಳು ಭಾಗಶಃ ಹಾನಿಯಾಗಿದೆ ಇವುಗಳಿಗೆ ಸರಕಾರದ ಮಾನದಂಡದ ಆಧಾರದಲ್ಲಿ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ಮಧ್ಯ ಪ್ರವೇಶಿಸಿದ ಸಚಿವರು ಮನೆಗಳು ಅತೀ ಹೆಚ್ಚು ಹಾನಿಯಾಗುವುದು ಬಡವರದ್ದು, ಹಾಗಾಗಿ ಅಧಿಕಾರಿಗಳು ಮಾನವೀಯತೆಯಿಂದ ಗರಿಷ್ಠ ಪ್ರಮಾಣದ ಪರಿಹಾರವನ್ನು ತಕ್ಷಣ ನೀಡುವಲ್ಲಿ ಮುಂದಾಗಬೇಕು ಎಂದರು. ಗ್ರಾಮ ಪಂಚಾಯಿತಿಗಳು ತಮ್ಮಲ್ಲಿರುವ ಆದಾಯದ ಹಣವನ್ನು ಜನರಿಗೆ ಅಗತ್ಯವಿರುವ ಕೆಲಸಕಾರ್ಯಗಳಿಗೆ ಉಪಯೋಗ ಮಾಡಬೇಕು, ಪ್ರಕೃತಿ ವಿಕೋಪದಂತಹ ಕಾರ್ಯಗಳಿಗೆ ಹೆಚ್ಚಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು. ಲೋಕೋಪಯೋಗಿ ಇಲಾಖೆಯವರು ರಸ್ತೆಗಳಲ್ಲಿ ನಿರ್ಮಾಣವಾಗುವ ಹೊಂಡಗಳಿಗೆ ಮುಕ್ತಿ ನೀಡಬೇಕು, ಶಾಲೆ, ಅಂಗನವಾಡಿಗಳ ಬಳಿಯಿರುವ, ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತಕ್ಷಣ ತೆರವು ಮಾಡಬೇಕು, ಮೆಸ್ಕಾಂ ಸಿಬಂದಿಗಳು ದಿನ ೨೪ ಗಂಟೆ ಎಚ್ಚರಿಕೆಯಿಂದ ಕೆಲಸ ಮಾಡುವುದರೊಂದಿಗೆ ಸಹಾಯವಾಣಿ ಕರೆಯನ್ನು ಸ್ವೀಕರಿಸಬೇಕು, ಜನರಿಗೆ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ಕಡಬ ಸಮುದಾಯ ಆರೋಗ್ಯಕೇಂದ್ರದಲ್ಲಿ ಡಯಾಲಿಸಿಸ್ ಸೆಂಟರ್ ಕಾರ್ಯಾಚರಿಸಲು ಸುಸಜ್ಜಿತ ಕಟ್ಟಡವಿಲ್ಲ, ಸಧ್ಯ ಮೀಟಿಂಗ್ ಹಾಲ್ ನಲ್ಲಿ ನಡೆಯುತ್ತಿದೆ ಎನ್ನುವ ಸಮಸ್ಯೆಗೆ ಉತ್ತರಿಸಿದ ಸಚಿವರು ಡಯಾಲಿಸಿ ಕೇಂದ್ರಕ್ಕೆ ನೂತನ ಕಟ್ಟಡ ನಿಮಾಣಕ್ಕೆ ಅಂದಾಜುಪಟ್ಟಿ ತಯಾರಿಸಿ ಜಿಲ್ಲಾ ಆರೋಗ್ಯಾಧಿಕಾರಿಯವರ ಮುಖಾಂರ ಸರಕಾಕ್ಕೆ ಮನವಿ ಸಲ್ಲಿಸಿದರೆ ಕ್ರಮ ಕೈಗೊಳ್ಳಬಹುದು ಎಂದರು.

ಕಡಬ ಸಮುದಾಯ ಆರೋಗ್ಯಕೇಂದ್ರದ ಸೂಪರಿಟೆಂಡೆoಟ್ ಶಾಸಕರ ಗಮನಕ್ಕೆ ತಾರದೆ ಸಭೆ ನಡೆಸುತ್ತಿದ್ದಾರೆ. ಕೇಳಿದರೆ ಪ್ರೊಟೋಕಾಲ್ನಲ್ಲಿ ಇಲ್ಲ ಎನ್ನುತ್ತಾರೆ. ಇಂತವರನ್ನು ಇಲ್ಲಿ ಕರ್ತವ್ಯ ನಿರ್ವಹಿಸಲು ಬಿಡಬಾರದು ತೆಗೆದು ಬೇರೆಡೆಗೆ ಹಾಕಿ ಎಂದು ಸಚಿವರ ಮುಂದೆ ತನ್ನ ಅಕ್ರೋಶ ವ್ಯಕ್ತಪಡಿಸಿದರು. ಶಾಸಕರನ್ನು ಕರೆದು ಮೀಟಿಂಗ್ ಮಾಡಿದರೆ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ಬಂದು ಸಮಸ್ಯೆ ಪರಿಹರಿಸಲು ಅವರು ಸರಕಾರದ ಮಟ್ಟದಲ್ಲಿ ಪ್ರಯತ್ನ ಪಡಲು ಸಹಕಾರಿಯಾಗುತ್ತದೆ. ಶಾಸಕರನ್ನು ಬಿಟಟು ಮೀಟಿಂಗ್ ಮಾಡಬಾರದು, ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಸಮತಿಯನ್ನು ಮಾಡಿ ಆಸ್ಪತ್ರೆಗಳ ಕುಂದುಕೊರತೆಗಳನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾಜಬಿನ್ ಪಟ್ಟಣ ಪಂಚಾಯಿತಿಯ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಹವಾಲು ಸಲ್ಲಿಸಿದರು. ತಕ್ಷಣ ಅಂದಾಜುಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಯವರ ಮಖಾಂತರ ಸರಕಾರಕ್ಕೆ ಕಳುಹಿಸುವಂತೆ ಸಚಿವರು ಸೂಚಿಸಿದರು.

ಭಾಗಶಃ ಅರಣ್ಯ ಸಮಸ್ಯೆ, ಕೆ.ಎಸ್.ಆರ್ಟಿಸಿ ಬಸ್ಸು ನಿಲ್ದಾಣ ಮುಂತಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಮಂಗಳೂರು ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹರೀಶ್ ಕುಮಾರ್, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ರಾಜ್ಯ ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಂಜಿ, ಜಿಲ್ಲಾಧಿಕಾರಿ ದರ್ಶನ್ ಎಚ್., ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ|ಅರುಣ್ ಕೆ., ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ವಿವಿಧ ಸಮಿತಿಗಳ ಮುಖಂಡರಾದ ಪಿ.ಪಿ.ವರ್ಗೀಸ್, ಫಝಲ್ ಕೋಡಿಂಬಾಳ, ಅಶ್ರಫ್ ಶೇಡಿಗುಂಡಿ, ಕೆ.ಎಮ್.ಹನೀಫ್, ಉಷಾ ಅಂಚನ್, ಕೆ.ಟಿ. ವಲ್ಸಮ್ಮ, ರಾಯ್ ಅಬ್ರಹಾಂ ಮತ್ತಿತರರು ಮಾತನಾಡಿದರು.
ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಭರತರಾಜ್ ಕಾರ್ಯಕ್ರಮ ನಿರೂಪಿಸಿದರು.





