ಉಜಿರೆ : ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಉಜಿರೆ ವಲಯದ ಸಭೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ಉಜಿರೆ ವಲಯದ ಸಹಕಾರದೊಂದಿಗೆ ಶ್ರೀ ರಾಮಕೃಷ್ಣ ಸಭಾ ಭವನದಲ್ಲಿ ನಡೆಯಿತು.

ಈ ಸಭೆಯಲ್ಲಿ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳ ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಭಜನಾ ಪರಿಷತ್ತಿನ ಕೆಲವೊಂದು ಪದಾಧಿಕಾರಿಗಳ ಬದಲಾವಣೆಯನ್ನು ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾವತಿ ಆರ್ ಶೆಟ್ಟಿ. ಉಪಾಧ್ಯಕ್ಷರಾಗಿ ಶ್ರೀ ಸುನಿಲ್ , ಕಾರ್ಯದರ್ಶಿಯಾಗಿ ಶ್ರೀ ಚರಣ್ ಕುಮಾರ್ ಜೊತೆ ಕಾರ್ಯದರ್ಶಿಯಾಗಿ ಶ್ರೀ ಸಂಪತ್ ಕುಮಾರ್
ಕೋಶಾಧಿಕಾರಿಯಾಗಿ ಶ್ರೀ ಪ್ರವೀಣ್ ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು.

ನಂತರ ಭಜನಾ ಪರಿಷತ್ತಿನ ಜಿಲ್ಲಾ ಸಮನ್ವಯಾಧಿಕಾರಿ ಶ್ರೀ ಸಂತೋಷ್ ಪಿ. ಅಳಿಯೂರು ರವರು ಪ್ರಾಸ್ತವಿಕವಾಗಿ ಮಾತನಾಡುತ್ತ ಸಭೆಯಲ್ಲಿ ಉಪಸ್ಥಿತರಿದ್ದ ಉಜಿರೆಯ ಯುವ ಗಾಯಕ ಮತ್ತು ಯುವ ಪ್ರತಿಭೆ ಸುನಿಲ್ ಹಾಗೂ ಅವರ ತಂಡಕ್ಕೆ ಅಭಿನಂದಿಸಿ ಶ್ರೀ ಮಂಜುನಾಥ ಸ್ವಾಮಿಯ ಹಾಗೂ ಶ್ರೀ ಜನಾರ್ದನ ಸ್ವಾಮಿಯ ಆಶೀರ್ವಾದ ಹಾಗೂ ಅನುಗ್ರಹ ತಮಗೆ ಸದಾ ಇರಲಿ ಎನ್ನುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟ ಹಾಗೂ ಭಜನೋತ್ಸವ ಬಗ್ಗೆ ಮತ್ತು ತಾಲೂಕಿನ ಸಾಧಕ ಪ್ರಶಸ್ತಿಗೆ ವಲಯದಲ್ಲಿ ಭಜನಾ ಮಂಡಳಿಯನ್ನು ಆಯ್ಕೆ ಮಾಡುವ ಕುರಿತು ನಿಖರವಾದ ಮಾಹಿತಿ ನೀಡಿ ಎಲ್ಲಾ ಭಜನಾ ಮಂಡಳಿಗಳ ಸಹಕಾರವನ್ನು ಕೋರಿದರು.

ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರು ಭಜನಾ ಮಂಡಳಿಗಳ ಸದಸ್ಯರುಗಳು ಭಜನೆ ಯೊಂದಿಗೆ ಸಕ್ರಿಯವಾಗಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದಾಗ ಭಜಕರ ಸಂಘಟನೆಯು ಮತ್ತಷ್ಟು ಜನರ ಮನೆ ಹಾಗೂ ಮನ ಮುಟ್ಟುವುದರಲ್ಲಿ ಸಂದೇಹವಿಲ್ಲ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಕೆಲಸದ ಬಗ್ಗೆಯೂ ಯೋಚಿಸಬೇಕಿದೆ. ಭಜಕ ಸಹೋದರಿಯರಿಗೆ ಮತ್ತು ಊರವರನ್ನು ಸೇರಿಸಿ ಸ್ವ- ಉದ್ಯೋಗದ ಮಾಹಿತಿಯನ್ನು ಕೊಡಿಸುವ ಬಗ್ಗೆ ತಿಳಿಸಿದರು. ಭಜನಾ ಮಂಡಳಿಗಳು ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು, ಭಜನೆ ಆಡಂಬರದಿಂದ ಕೂಡಿರಬಾರದು ಅದು ಭಕ್ತಿಯ ಭಜನೆ ಆಗಬೇಕು ಪ್ರಸ್ತುತ ಕುಣಿತ ಭಜನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವಂತೆ ಕುಳಿತು ಭಜನೆ ಮಾಡುವ ತಂಡದವರಿಗೆ ಕೂಡ ಪ್ರಾಶಸ್ತ್ಯ ಸಿಗಬೇಕು ಹಾಗೂ ಭಜನೋತ್ಸವ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನು ನಿಷೇಧಿಸುವ ಕುರಿತು ಎಲ್ಲಾ ಭಜನಾ ಮಂಡಳಿಗಳ ಪದಾಧಿಕಾರಿಗಳು ಯೋಚಿಸಬೇಕು ಎಂದರು.


ಈ ಸಂದರ್ಭದಲ್ಲಿ ಭಜನಾ ಪರಿಷತ್ ನ ತಾಲೂಕು ಅಧ್ಯಕ್ಷರಾದ ಶ್ರೀ ರವಿರಾಜ್ ಚಾರ್ಮಾಡಿ, ವಲಯದ ನೂತನ ಅಧ್ಯಕ್ಷೆಯಾದ ಶ್ರೀಮತಿ ಪುಷ್ಪಾವತಿ ಆರ್ ಶೆಟ್ಟಿ. ಕಾರ್ಯದರ್ಶಿ ಶ್ರೀ ಚರಣ್ ಕುಮಾರ್ ಅರಳಿ, ಜೊತೆಕಾರ್ಯದರ್ಶಿ ಸಂಪತ್ ಬೈಪಾಡಿ. ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಶ್ರೀ ಪ್ರೇಮ್ ಪ್ರಸಾದ್, ಸೇವಾಪ್ರತಿನಿಧಿ ಶ್ರೀಮತಿ ಪ್ರೇಮಲತಾ. ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು .
ವಲಯ ಮೇಲ್ವಿಚಾರಕರು ಸ್ವಾಗತಿಸಿ, ಕೊನೆಯಲ್ಲಿ ಸೇವಾಪ್ರತಿನಿಧಿ ವಂದಿಸಿದರು.





