ಉಡುಪಿ: ಉಡುಪಿಯಲ್ಲಿ ಸಂಚಲನ ಮೂಡಿಸಿದ್ದ ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳು ಶವವಾಗಿ ಪತ್ತೆಯಾಗಿದ್ದಾರೆ.

ಪತ್ನಿಗೆ ವಿಷಪೂರಿತ ಇಂಜೆಕ್ಷನ್ ನೀಡಿ ಕೊಲ್ಲಲು ಯತ್ನಿಸಿ ತಲೆಮರೆಸಿಕೊಂಡಿದ್ದ ಪತಿ ಹಾಗೂ ಆತನ ಪ್ರೇಯಸಿ ಸೌಪರ್ಣಿಕಾ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗೋಳಿಹೊಳೆ ಗ್ರಾಮದ ಚಾರ್ಸಾಲಿನಲ್ಲಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಶರಣಾದವರನ್ನು ಗೋಳಿಹೊಳೆಯ ಆಟೋ ಚಾಲಕ ವಿಠಲ ನಾಯ್ಕ (35) ಹಾಗೂ ಜಡ್ಕಲ್ ನಿವಾಸಿ ಭವ್ಯಾ ನಾಯ್ಕ (33) ಎಂದು ಗುರುತಿಸಲಾಗಿದೆ.

ಸುಮಾರು 20 ದಿನಗಳ ಹಿಂದೆ ವಿಠಲ ನಾಯ್ಕ ತನ್ನ ಪ್ರೇಯಸಿ ಭವ್ಯಾ ಜೊತೆಗೂಡಿ ಪತ್ನಿ ಶ್ಯಾಮಲಾಗೆ ವಿಷಕಾರಿ ಇಂಜೆಕ್ಷನ್ ನೀಡಿ ಕೊಲೆ ಮಾಡಲು ಯತ್ನಿಸಿದ್ದನು. ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂಜೆಕ್ಷನ್ನಿಂದ ಗಂಭೀರ ಸ್ಥಿತಿಯಲ್ಲಿದ್ದ ಶ್ಯಾಮಲಾ ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಇದೀಗ ಚೇತರಿಸಿಕೊಂಡಿದ್ದಾರೆ. ಮೃತ ವಿಠಲ್ಗೆ 10 ವರ್ಷದ ಮಗ ಹಾಗೂ 2 ತಿಂಗಳ ಹಸುಗೂಸಿದೆ.

ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಇಬ್ಬರೂ ತಲೆಮರೆಸಿಕೊಂಡಿದ್ದರು. ಮಂಗಳವಾರ ಸೌಪರ್ಣಿಕಾ ನದಿ ಸಮೀಪದ ಅರಣ್ಯ ಭಾಗದಲ್ಲಿ ಇಬ್ಬರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೆಲ ದಿನಗಳ ಹಿಂದೆಯೇ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಹಾಗೂ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





