ಉಜಿರೆ: ಉಜಿರೆಯಲ್ಲಿ ಕಂಪ್ಯೂಟರ್ ಸರ್ವೀಸ್ ಹಾಗೂ ಸೇಲ್ಸ್ ಮಳಿಗೆಗಳ ವಿರುದ್ಧ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಅವಹೇಳನಕಾರಿ ಮತ್ತು ಆಧಾರರಹಿತ ವಿಡಿಯೋ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಉಜಿರೆಯ ಕಂಪ್ಯೂಟರ್ ವರ್ತಕರು ವರ್ತಕ ಸಂಘಕ್ಕೆ ಅಧಿಕೃತವಾಗಿ ದೂರು ನೀಡಿದ್ದಾರೆ.

ಇತ್ತೀಚೆಗೆ ‘ರೈಡಿಂಗ್ ಜೋಡಿಗಳು’ ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಮಂಗಳೂರಿನ ಕಂಪ್ಯೂಟರ್ ಸರ್ವೀಸ್ ಕೇಂದ್ರವೊಂದರ ಪ್ರಮೋಷನ್ ಮಾಡುವ ಭರದಲ್ಲಿ, ಉಜಿರೆಯ ಎಲ್ಲಾ ಕಂಪ್ಯೂಟರ್ ಸರ್ವೀಸ್ ಕೇಂದ್ರಗಳ ಕುರಿತು ಗ್ರಾಹಕರಿಗೆ ತಪ್ಪುದಾರಿಗೆಳೆಯುವ ಹಾಗೂ ವಿಪರೀತ ಬೆಲೆ ವಿಧಿಸಿ ಮೋಸ ಮಾಡುತ್ತಿದ್ದಾರೆ ಎಂಬಂತೆ ಬಿಂಬಿಸುವ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು.

ಯಾವುದೇ ಪೂರ್ವ ಪರಿಶೀಲನೆ ಹಾಗೂ ಆಧಾರವಿಲ್ಲದೆ ಮಾಡಿರುವ ಈ ಏಕಪಕ್ಷೀಯ ಹೇಳಿಕೆಯಿಂದ ಉಜಿರೆಯ ಪ್ರಾಮಾಣಿಕ ವರ್ತಕರಿಗೆ ಮತ್ತು ತಂತ್ರಜ್ಞರಿಗೆ ತೀವ್ರ ಮುಜುಗರ ಹಾಗೂ ಆರ್ಥಿಕ ನಷ್ಟ ಉಂಟಾಗುವ ಭೀತಿ ಎದುರಾಗಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಉಜಿರೆ ವರ್ತಕ ಸಂಘವು ದೂರು ಸ್ವೀಕರಿಸಿದ್ದು, ಕೂಡಲೇ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ ಎಚ್ಚರಿಕೆ ನೀಡಿದೆ. ವಿಡಿಯೋ ಅಪ್ಲೋಡ್ ಮಾಡುವ ಮುನ್ನ ಉಜಿರೆಯ ಯಾವುದೇ ಮಳಿಗೆಗೆ ಆ ಗ್ರಾಹಕರು ರಿಪೇರಿಗೆ ಬಂದಿಲ್ಲ ಎಂಬುದನ್ನು ವರ್ತಕರು ಸ್ಪಷ್ಟಪಡಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಇನ್ಸ್ಟಾಗ್ರಾಮ್ ಪೇಜ್ನಿಂದ ಆ ವಿಡಿಯೋವನ್ನು ಸಂಪೂರ್ಣವಾಗಿ ಡಿಲೀಟ್ ಮಾಡಬೇಕು ಅಥವಾ ಉಜಿರೆಯ ವರ್ತಕರ ಬಗ್ಗೆ ಇರುವ ಆಕ್ಷೇಪಾರ್ಹ ಅಂಶಗಳನ್ನು ತೆಗೆದುಹಾಕಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ವರ್ತಕರು ಎಚ್ಚರಿಕೆ ನೀಡಿದ್ದಾರೆ. ತಪ್ಪಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ಪತ್ರದಲ್ಲಿ ತಿಳಿಸಲಾಗಿದೆ.





