ಸುಳ್ಯ : ಸುಳ್ಯದ ಸಂಪಾಜೆಯಲ್ಲಿ ಸಂಚಲನ ಮೂಡಿಸಿದ್ದ ಫಾತಿಮತ್ ನಿಶಾನ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಪ್ರಮುಖ ಆರೋಪಿಗಳಿಗೆ ಪುತ್ತೂರಿನ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕಳೆದ ಜುಲೈ 18ರ ರಾತ್ರಿ ಸಂಪಾಜೆಯ ಕಡೆಪಾಲದಲ್ಲಿ ಫಾತಿಮತ್ ನಿಶಾನ ಎಂಬ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಸಾವಿಗೂ ಮುನ್ನ ಆಕೆ ಕುಟುಂಬಸ್ಥರ ಮೇಲೆ ಗಂಭೀರ ಹಿಂಸೆಯ ಆರೋಪ ಮಾಡಿದ್ದರು ಎನ್ನಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ಮೂವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಇದೀಗ ನ್ಯಾಯಾಂಗ ಬಂಧನದಲ್ಲಿದ್ದ ಅತ್ತೆ ಆಯಿಷಾ ಮತ್ತು ನಾದಿನಿ ಫಸೀಲಾ ಸಲ್ಲಿಸಿದ್ದ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಪುತ್ತೂರಿನ ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯವು, ಇಬ್ಬರಿಗೂ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಆರೋಪಿಗಳ ಪರವಾಗಿ ಸುಳ್ಯದ ಹಿರಿಯ ನ್ಯಾಯವಾದಿ ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಎನ್. ಕೆ. ಹಾಗೂ ವಿಮಲೇಶ್ ಆರ್. ಗೌಡ ವಾದ ಮಂಡಿಸಿದ್ದರು.







