ದಾವಣಗೆರೆ: ರಾಜ್ಯದಲ್ಲಿ ಇತ್ತೀಚಿಗೆ ಹೆಂಡ್ತಿ, ಗಂಡನನ್ನ, ಗಂಡ-ಹೆಂಡ್ತಿಯನ್ನ ಕೊಲೆ ಮಾಡೋ ಪ್ರಕರಣಗಳು ಹೆಚ್ಚುತ್ತಲೇ ಇದೆ.

ದಾವಣಗೆರೆಯಲ್ಲೂ ಇಂಥಹದ್ದೇ ಘಟನೆ ನಡೆದಿದ್ದು, ತಾಳಿ ಕಟ್ಟಿ 12 ವರ್ಷ ಸಂಸಾರ ಮಾಡಿದ ಗಂಡನನ್ನೇ ಕೊಂದ ಹೆಂಡ್ತಿ ಬಳಿಕ ಆತನ ಮೃತದೇಹವನ್ನ ತುಂಗಭದ್ರಾ ನದಿಗೆ ಎಸೆದಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.
ಗಂಡನನ್ನು ಕೊಲೆ ಮಾಡಿಸಿ ಮನೆಗೆ ಬಂದು ನಾಪತ್ತೆ ನಾಟಕವಾಡಿದವಳು ಸಿಕ್ಕಿಬಿದ್ದಿದ್ದು ಹೇಗೆ? ಪ್ರಿಯಕರನ ಜೊತೆ ಸೇರಿ ಗಂಡನಿಗೆ ಚಟ್ಟ ಕಟ್ಟಿದ್ದು ಯಾಕೆ ಈ ಐನಾತಿ ಮಹಿಳೆ?

ಪ್ಲಾನ್ ಮಾಡಿ ಗಂಡನಿಗೆ ಚಟ್ಟ ಕಟ್ಟಿದಳು:
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗ್ತಿದ್ದ ಅನ್ನೋ ಕಾರಣಕ್ಕೆ ಗಂಡನಿಗೆ ಹೆಂಡ್ತಿಯೇ ಚಟ್ಟ ಕಟ್ಟಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಪಾಮೇನಹಳ್ಳಿ ಗ್ರಾಮದ ರಘು (36) ಕೊಲೆಯಾದ ದುರ್ದೈವಿಯಾಗಿದ್ದಾನೆ. ಬಾರ್ನಲ್ಲಿ ಕಂಠ ಪೂರ್ತಿ ಕುಡಿಸಿ ಬಳಿಕ ಕೊಂದು ಆತನನ್ನ ತುಂಗಭದ್ರಾ ನದಿಗೆ ಎಸೆದು ಬಂದಿದ್ದಾರೆ ಈ ಹಂತಕರು. ಅಸಲಿಗೆ ಅಂದು ನಡೆದಿದ್ದೇನು?
ಉಬೇದುಲ್ಲಾ ಅಲಿಯಾಸ್ ಮುನ್ನಾ ಜೊತೆ ಲವ್:
ದಾವಣಗೆರೆ ತಾಲೂಕು ಪಾಮೇನಹಳ್ಳಿ ಗ್ರಾಮದ ರಘು ಎಂಬಾತನ ಜೊತೆ 12 ವರ್ಷದ ಹಿಂದೆಯೇ ಶ್ರುತಿ ಎಂಬಾಕೆಗೆ ಮದುವೆ ಆಗಿತ್ತು. 8-9 ವರ್ಷ ಗಂಡನ ಜೊತೆಗೆ ಸಂಸಾರ ಮಾಡಿದ ಹೆಂಡ್ತಿ ಶ್ರುತಿ ಕಳೆದ ಎರಡು ವರ್ಷಗಳಿಂದ ಉಬೇದುಲ್ಲಾ ಅಲಿಯಾಸ್ ಮುನ್ನಾ ಜೊತೆ ಪ್ರೀತಿಯಲ್ಲಿ ಬಿದ್ದಳು. ಇಬ್ಬರ ಅಕ್ರಮ ಸಂಬಂಧಕ್ಕೆ ಗಂಡನೇ ಅಡ್ಡಿಯಾಗ್ತಿದ್ದ ಅಂತ ಲವರ್ ಜೊತೆ ಪ್ಲಾನ್ ಮಾಡಿ ರಘುವಿನ ಕಥೆ ಮುಗಿಸಿದ್ದಾಳೆ ಎನ್ನುವ ಆರೋಪ ಶ್ರುತಿ ಮೇಲಿದೆ.
ಕುಡಿದು ಬಂದು ಜಗಳ ಅಂತ ಕೊಂದೇ ಬಿಟ್ಟಳಾ?:
ಮದುವೆಯಾಗಿ ಹಲವು ವರ್ಷ ಗಂಡನ ಜೊತೆ ಸಂಸಾರ ಮಾಡಿದ ಶ್ರುತಿ ಕಳೆದ 2-3 ವರ್ಷದಿಂದ ಉಬೇದುಲ್ಲಾ ಜೊತೆ ಅಕ್ರಮ ಸಂಬಂಧ ಹೊಂದಿದ್ದಳಂತೆ. ಗಂಡ ರಘು ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳವಾಡ್ತಿದ್ದನಂತೆ. ಇದ್ರಿಂದ ರಘುವಿನೊಂದಿಗೆ ಸಂಸಾರ ನಡೆಸಲು ಕಿರಿಕಿರಿಯಾಗ್ತಿದೆ ಎಂದು ಆತನನ್ನ ಕೊಂದೇ ಬಿಟ್ಲಾ?
ಬಾರ್ನಲ್ಲಿ ಕುಡಿಸಿ ಬಳಿಕ ಹತ್ಯೆ:
ಗಂಡನ ಕುಡಿತದ ಚಟವನ್ನೇ ಬಳಸಿಕೊಂಡ ಹೆಂಡ್ತಿ ಹಾಗೂ ಆಕೆಯ ಲವರ್, ಆತನನ್ನ ದಾವಣಗೆರೆ ಬಾರ್ ಒಂದಕ್ಕೆ ಕರೆದುಕೊಂಡು ಹೋಗಿ ಚೆನ್ನಾಗಿ ಕುಡಿಸಿದ್ದಾರೆ. ಬಳಿಕ ಹರಿಹರ ತುಂಗಭದ್ರಾ ನದಿ ಬಳಿ ಕರೆದೊಯ್ದು ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಯಾರಿಗೂ ತಿಳಿಯದಂತೆ ಶವವನ್ನ ನದಿಗೆ ಎಸೆದು ಹಂತಕರು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಗಂಡ ಮಿಸ್ಸಿಂಗ್ ನಾಟಕವಾಡಿ ಸಿಕ್ಕಿಬಿದ್ದಳು:
ಉಬೇದುಲ್ಲಾ ಹಾಗೂ ಆತನ ಸ್ನೇಹಿತ ಸುರೇಶ್ ಇಬ್ಬರು ಈ ಕೃತ್ಯವೆಸಗಿದ್ದು, ಇಬ್ಬರಿಗೂ ಶ್ರುತಿ ಸಾಥ್ ಕೊಟ್ಟಿದ್ದಾಳೆ. ಪತಿಯನ್ನ ಕೊಲೆ ಮಾಡಿಸಿ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ಹೆಂಡ್ತಿ ಶ್ರುತಿ ದೂರು ನೀಡಿದ್ದಾಳೆ. ಈ ಬಗ್ಗೆ ಶ್ರುತಿ ಸಹೋದರಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

ಕೊಲೆ ಮಾಡಿಸಿದ ಆರೋಪಿ ಶ್ರುತಿ ಹಾಗೂ ಮೃತದೇಹ ಸಾಗಿಸಿರುವ ಮೂವರನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಇನ್ನು ಕೊಲೆಯಾದ ರಘುವಿನ ಮೃತ ದೇಹಕ್ಕಾಗಿ ತುಂಗಭದ್ರಾ ನದಿಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







