ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ 24 ವರ್ಷದ ವಿವಾಹಿತ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಚಿಕ್ಕಮುಡ್ನೂರು ಗ್ರಾಮದ ಮುದ್ದೋಡಿಯಲ್ಲಿ ನಡೆದಿದೆ.

ಮುದ್ದೋಡಿ ನಿವಾಸಿ ಶೇಖರ್ ಎಂಬವರ ಪತ್ನಿ ಸೌಮ್ಯ . ಕಳೆದ ಕೆಲವು ದಿನಗಳಿಂದ ಸೌಮ್ಯ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಸ್ಥಳೀಯ ಕ್ಲಿನಿಕ್ ಒಂದರಲ್ಲಿ ಔಷಧಿ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರೆನ್ನಲಾಗಿದೆ.

ಆದರೆ, ಆಗಸ್ಟ್ 29ರಂದು ಅವರ ಆರೋಗ್ಯ ಸ್ಥಿತಿ ಏಕಾಏಕಿ ಕ್ಷೀಣಿಸಿದ್ದು, ತಕ್ಷಣವೇ ಪುತ್ತೂರಿನ ಆಸ್ಪತ್ರೆಗೆ ಕರೆತರಲಾಯಿತು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಸೌಮ್ಯ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


ಮೃತ ಸೌಮ್ಯ ಅವರು ಪತಿ ಶೇಖರ್ ಹಾಗೂ ಕೇವಲ ಒಂದೂವರೆ ವರ್ಷದ ಹಸುಗೂಸನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತ ಸೌಮ್ಯ ಅವರ ತಾಯಿ, ಸೇಡಿಯಾಪು ಕಜೆ ನಿವಾಸಿ ಸುಂದರಿ ಅವರು ನೀಡಿದ ದೂರಿನನ್ವಯ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






