ಉಪ್ಪಿನಂಗಡಿ: ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆ ಮಾತಿದೆ. ಆದ್ರೆ ಇಲ್ಲೊಬ್ಬಳು ತಾಯಿ, ಗಂಡನ ಮೇಲಿನ ಕೋಪಕ್ಕೆ ತನ್ನ ವಿವೇಚನೆಯನ್ನೇ ಕಳೆದುಕೊಂಡು ಇಬ್ಬರು ಕಂದಮ್ಮಗಳನ್ನು ಬಾವಿಗೆಸೆದಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಈ ಘೋರ ದುರಂತದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಣೆಯಲ್ಲಿ ಶನಿವಾರ ಮಧ್ಯಾಹ್ನ ಈ ದಾರುಣ ಘಟನೆ ನಡೆದಿದೆ. ಪೆರ್ಣೆ ನಿವಾಸಿ 32 ವರ್ಷದ ಸಿನಾನ್ ಹಾಗೂ ಆತನ ಪತ್ನಿ 28 ವರ್ಷದ ನೂರುನ್ನಿಸಾ ನಡುವೆ ಶನಿವಾರ ಮಧ್ಯಾಹ್ನ ಫೋನ್ನಲ್ಲಿ ತೀವ್ರ ಜಗಳ ನಡೆದಿದೆ.
ಗಂಡನ ಜೊತೆಗಿನ ಕದನದಿಂದ ರೊಚ್ಚಿಗೆದ್ದ ನೂರುನ್ನಿಸಾ, ಕೋಪದ ಭರದಲ್ಲಿ ಮನೆಯ ಮುಂದಿದ್ದ ಬಾವಿಗೆ ತನ್ನ ಮೂರೂವರೆ ವರ್ಷದ ಮಗು ಹಾಗೂ ಗಂಡನ ತಂಗಿಯ ಮೂರು ವರ್ಷದ ಮಗುವನ್ನು ಮನೆ ಸಮೀಪದ ಬಾವಿಗೆ ಎಸೆದಿದ್ದಾಳೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಬಾವಿಗಿಳಿದು ಇಬ್ಬರೂ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಆದರೆ, ಗಂಡನ ತಂಗಿಯ ಮೂರು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಆರೋಪಿತೆಯ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತೆ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಕ್ಷಣಿಕದ ಕೋಪ ಎಂಥಾ ದುರಂತಕ್ಕೆ ಕಾರಣವಾಗುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.





